ಇನ್ನು 3 ವರ್ಷಗಳಲ್ಲಿ ಭಾರತ ಯೂರಿಯಾ ರಫ್ತು ರಾಷ್ಟ್ರವಾಗಲಿದೆ |News Mirchi

ಇನ್ನು 3 ವರ್ಷಗಳಲ್ಲಿ ಭಾರತ ಯೂರಿಯಾ ರಫ್ತು ರಾಷ್ಟ್ರವಾಗಲಿದೆ

ಭಾರತವು ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಇನ್ನು ಮೂರು ವರ್ಷಗಳಲ್ಲಿ ಯೂರಿಯಾ ರಫ್ತು ರಾಷ್ಟ್ರವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೃಷಿ ಅನುಸಂಧಾನ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಸಂಕಲ್ಪ ಸಿದ್ಧ” ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಮುಂದಿನ ಮೂರು ವರ್ಷಗಳಲ್ಲಿ ಏಷ್ಯಾದ ದೇಶಗಳಿಗೆ ಯೂರಿಯಾ ರಫ್ತು ಮಾಡಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ 300 ಲಕ್ಷ ಮೆಟ್ರಿಕ್ ಟನ್ ಬೇಡಿಕೆಯಿದ್ದು, 2014-15 ರಲ್ಲಿ 87 ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನು ರಫ್ತು ಮಾಡಿದ್ದೇವೆ. ಶಾಸನಬದ್ಧ ಬೆಲೆ ನಿಯಂತ್ರಣದಡಿಯಲ್ಲಿರುವ ಏಕೈಕ ರಸಗೊಬ್ಬರ ಇದಾಗಿದೆ. ಸುಮಾರು 320 ಲಕ್ಷ ಮೆಟ್ರಿಕ್ ಟನ್ ಅಥವಾ 70 ಕೋಟಿ ಚೀಲಗಳಷ್ಟು ಯೂರಿಯಾಗೆ ಬೇವು ಲೇಪನ ಮಾಡಿರುವುದು ಒಂದು ದಾಖಲೆ ಎಂದು ಸಚಿವರು ಹೇಳಿದರು.

2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಏಳು ಅಂಶಗಳ ಕಾರ್ಯತಂತ್ರವನ್ನು ರೂಪಿಸಿಲಾಗಿದೆ. ರೈತರಿಗೆ ಬೆಳೆ ಸಾಲ ನೀಡುವುದಕ್ಕಾಗಿ ನಬಾರ್ಡ್ ಹಾಗೂ ಗ್ರಾಮೀಣ ಬ್ಯಾಂಕ್ ಮೂಲಕ ರೂ.10 ಲಕ್ಷ ಕೋಟಿ ಬಳಸಲಾಗುತ್ತದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

ಸಚಿವ ಸದಾನಂದ ಗೌಡ ಅವರು ಮಾತನಾಡಿ, ಬರ ಹಾಗೂ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಕೈಗೊಂಡಿದ್ದು, ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

Loading...
loading...
error: Content is protected !!