ಶಶಿಕಲಾ ಮತ್ತು ಆಪ್ತರ ಮೇಲೆ ಐಟಿ ದಾಳಿ, ಭಾರೀ ಪ್ರಮಾಣದ ಆಸ್ತಿ ಪತ್ತೆ

ಚೆನ್ನೈ: ಶಶಿಕಲಾ ಆಪ್ತರು, ಉದ್ಯಮಿಗಳ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ಮುಂದುವರೆದಿವೆ. ಈ ದಾಳಿಗಳಲ್ಲಿ ನಿರೀಕ್ಷಿಸದ ಪ್ರದೇಶಗಳಲ್ಲಿಯೂ ಕೂಡಾ ಬೆಲೆ ಬಾಳುವ ಚಿನ್ನ, ವಸ್ತುಗಳನ್ನು ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ. ಶೋಧ ನಡೆಯುತ್ತಿರುವ ಪ್ರದೇಶಗಳಲ್ಲಿ ನಗದು, ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆನ್ನಲಾಗಿದೆ.

ಚೆನ್ನೈನ 40 ಪ್ರದೇಶಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದು, ಶಶಿಕಲಾ ಸಂಬಂಧಿ ಕೃಷ್ಣಪ್ರಿಯ ನಿವಾಸದಲ್ಲಿಯೂ  ಶೋಧ ನಡೆದಿದೆ. ಈ ವೇಳೆ ಭಾರೀ ಪ್ರಮಣದಲ್ಲಿ ಶಶಿಕಲಾ ಅಕ್ರಮ ಆಸ್ತಿಗಳು ಹೊರಬಿದ್ದಿರುವುದಾಗಿ ವರದಿಯಾಗಿದೆ. ಶಶಿಕಲಾ ಹೆಸರಿನಲ್ಲಿ 10 ಬೋಗಸ್ ಕಂಪನಿಗಳು ಬಹಿರಂಗವಾಗಿವೆ. ನೋಟು ರದ್ದು ಸಮಯದಲ್ಲಿ ಈ ಬೋಗಸ್ ಕಂಪನಿಗಳ ಮೂಲಕ ಭಾರಿ ವ್ಯವಹಾರಗಳು ನಡೆದಿವೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಶಶಿಕಲಾ, ಆಕೆಯ ಸಂಬಂಧಿಕರ 317 ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಐಟಿ ಶಾಕ್, ಏಕಕಾಲದಲ್ಲಿ 187 ಕಡೆ ದಾಳಿ

ಸದ್ಯ ಶೋಧ ಕಾರ್ಯಚರಣೆ ಮುಂದುವರೆದಿದ್ದು, ಕಾರ್ಯಚರಣೆ ಮುಗಿದ ನಂತರ ಎಷ್ಟು ಮೊತ್ತ ನಗದು, ದಾಖಲೆಗಳನ್ನು ಸೀಜ್ ಮಾಡಿದ್ದೇವೆ ಎಂಬುದನ್ನು ತಿಳಿಸುತ್ತೇವೆ ಎಂದು ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಲವು ಪ್ರದೇಶಗಳಲ್ಲಿ ಕಾರ್ಯಚರಣೆ ಮುಗಿದಿದ್ದು, ಇತರೆ ಪ್ರದೇಶಗಳಲ್ಲಿ ಇದು ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲಲ್ಇ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ, ಆಕೆಯ ಪತಿ ನಟರಾಜನ್, ಸಹೋದರ ದಿನಕರನ್, ಸೋದರಳಿಯ ದಿನಕರನ್ ಸೇರಿದಂತೆ ಆಪ್ತರು, ಅವರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಅವರ ಸಂಬಂಧಿಕರು, ಅಡುಗೆಯವರು, ಮನೆಗೆಲಸದವರು, ವೈದ್ಯ, ಆಡಿಟರ್ ಹೀಗೆ ಆ ಕುಟುಂಬದೊಂದಿಗೆ ಸಂಬಂಧವಿರುವವರ ಮನೆ ಮತ್ತು ಕಛೇರಿಗಳಲ್ಲಿ ಮೂರು ದಿನಗಳಿಂದ ಐಟಿ ಅಧಿಕಾರಿಗಳ ದಾಳಿ ಮುಂದುವರೆದಿದೆ.

Get Latest updates on WhatsApp. Send ‘Add Me’ to 8550851559