ಭಾರತದ ಧ್ವನಿ ದೊಡ್ಡದು, ಉತ್ತರ ಕೊರಿಯಾ ಬಿಕ್ಕಟ್ಟು ಪರಿಹಾರಕ್ಕೆ ನೆರವು ಕೇಳಿ: ಅಮೆರಿಕಾ ಕಮಾಂಡರ್

ಕ್ಷಿಪಣಿ ಪರೀಕ್ಷೆಗಳಿಂದ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಉತ್ತರ ಕೊರಿಯಾದಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಭಾರತದ ನೆರವು ಪಡೆಯಬೇಕು ಎಂದು ಯು.ಎಸ್.ಫೆಸಿಫಿಕ್ ಕಮಾಂಡರ್ ಅಡ್ಮಿರಲ್ ಹ್ಯಾರಿಸ್ ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಭಾರತ ದೇಶದ ಧ್ವನಿ ಗಟ್ಟಿಯಾಗಿದ್ದು, ಉತ್ತರ ಕೊರಿಯಾದಿಂದ ಉದ್ಭವಿಸಿರುವ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅಮೆರಿಕಕ್ಕೆ ಸಹಾಯ ಮಾಡುತ್ತದೆ. ಬಿಕ್ಕಟ್ಟು ಪರಿಹಾರಕ್ಕೆ ಭಾರತ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹ್ಯಾರಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಉತ್ತರ ಕೊರಿಯಾ ಅಮೆರಿಕಾ ಸಮೀಪದ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಎಚ್ಚರಿಸಿದೆ. ಇದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪರೀಕ್ಷೆಗಳಿಗೆ ಉತ್ತರ ಕೊರಿಯಾ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗೆ ಬೆದರಿಕೆಗಳನ್ನು ಮುಂದುವರೆಸಿದರೆ ಎಂದೂ ನೋಡದ ವಿನಾಶವನ್ನು ನೋಡಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಉತ್ತರ ಕೊರಿಯಾ ಬಗ್ಗುತ್ತಿಲ್ಲ.

ಜುಲೈನಲ್ಲಿ ಉತ್ತರ ಕೊರಿಯಾ ಎರಡು ಖಂಡಾಂತರ ಕ್ಷಿಪಣಿಗಳನ್ನು ಪರೀಕ್ಷಿಸಿತ್ತು. ಆ ಕ್ಷಿಪಣಿಗಳ ಪರೀಕ್ಷೆಗಳನ್ನು ಭಾರತ ಸೇರಿದಂತೆ ಹಲವು ದೇಶಗಳು ಖಂಡಿಸಿದ್ದವು. ಇದರೊಂದಿಗೆ ಉತ್ತರ ಕೊರಿಯಾದೊಂದಿಗೆ ಭಾರತ ಹೊಂದಿದ್ದ ವಾಣಿಜ್ಯ ಸಂಬಂಧಗಳನ್ನೂ ಭಾರತ ಇದೇ ವರ್ಷಾರಂಭದಲ್ಲಿ ಕಡಿದುಕೊಂಡಿತ್ತು. ಭಾರತದ ತೀರ್ಮಾನವನ್ನು ಟ್ರಂಪ್ ಸರ್ಕಾರ ಪ್ರಶಂಸಿಸಿತ್ತು.

Loading...
error: Content is protected !!