ಡೊಕ್ಲಾಮ್ ವಿವಾದಕ್ಕೆ ತೆರೆ, ಸೇನೆ ಹಿಂತೆಗೆದಕ್ಕೆ ಚೀನಾ-ಭಾರತ ಅಂಗೀಕಾರ |News Mirchi

ಡೊಕ್ಲಾಮ್ ವಿವಾದಕ್ಕೆ ತೆರೆ, ಸೇನೆ ಹಿಂತೆಗೆದಕ್ಕೆ ಚೀನಾ-ಭಾರತ ಅಂಗೀಕಾರ

ಭಾರತ ಮತ್ತು ಚೀನಾ ನಡುವೆ ಕಳೆದೆರಡು ತಿಂಗಳಿಂದ ನೆಲೆಸಿರುವ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾರತ-ಭೂತಾನ್-ಚೀನಾ ಟ್ರೈಜಂಕ್ಷನ್ ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ಉಭಯದೇಶಗಳು ಅಂಗೀಕರಿಸಿವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ. ರಾಜತಾಂತ್ರಿಕ ಮಾತುಕತೆಯಿಂದ ಈ ಬೆಳವಣಿಗೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ಕಚೇರಿಯು ಹೇಳಿದೆ.

ಡೊಕ್ಲಾಮ್ ವಿವಾದಕ್ಕೆ ಸಂಬಂದಿಸಿದಂತೆ ಎರಡೂ ದೇಶಗಳ ನಡುವೆ ನೆಲೆಸಿದ್ದ ಉದ್ವಿಘ್ನ ಪರಿಸ್ಥಿತಿಗಳ ಕುರಿತು ಭಾರತ ಮತ್ತು ಚೀನಾ ನಡುವೆ ಕಳೆದ ಕೆಲವು ವಾರಗಳಿಂದ ರಾಜತಾಂತ್ರಿಕ ಮಾತುಕತೆ ನಡೆದಿತ್ತು. ಇದರ ಫಲವಾಗಿ ಡೊಕ್ಲಾಮ್ ನಿಂದ ಸೈನ್ಯವನ್ನು ಹಿಂದೆ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿದ್ದು, ಸದ್ಯ ಎರಡೂ ದೇಶಗಳ ಸೇನೆ ಹಿಂದೆ ಸರಿಯುತ್ತಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇನ್ನು ಕೆಲವೇ ದಿನಗಳಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈ ಹಿಂದೆ ಡೊಕ್ಲಾಂ ಪ್ರದೇಶದಲ್ಲಿ ಚೀನಾ ಸೇನೆ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಇದರಿಂದ ಭಾರತದ ಗಡಿಗೆ ಆಪತ್ತು ಬರಲಿದೆ ಎಂದರಿತ ಭಾರತೀಯ ಸೇನೆ ಸಿಕ್ಕಿಂ ಗಡಿಯನ್ನು ದಾಟಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸಿತ್ತು. ಭಾರತದ ಈ ಕ್ರಮಕ್ಕೆ ಚೀನಾ ಆಕ್ರೋಶ ವ್ಯಕ್ತಪಡಿಸಿ ಹಲವು ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಭಾರತ ತನ್ನ ಪಟ್ಟು ಸಡಿಲಿಸಿರಲಿಲ್ಲ.

Loading...
loading...
error: Content is protected !!