ದೇಶೀಯ ಉದ್ಯಮ ರಕ್ಷಿಸಲು ಚೀನಾ ಟೆಂಪರ್ಡ್ ಗ್ಲಾಸ್ ಗಳಿಗೆ ಆಮದು ನಿರೋಧಕ ಸುಂಕ

ನವದೆಹಲಿ: ಚೀನಾದಿಂದ ಆಮದಾಗುವ ವಸ್ತುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಮತ್ತೊಂದು ತೀರ್ಮಾನ ಕೈಗೊಂಡಿದೆ. ಮೊಬೈಲ್ ಫೋನ್ ಸ್ಕ್ರೀನ್ ಗಳಿಗೆ ರಕ್ಷಣೆಯಾಗಿ ಬಳಸುವ ಟೆಂಪರ್ಡ್ ಗ್ಲಾಸ್ ಗಳ ಮೇಲೆ ಆಮದು ನಿರೋಧಕ ಸುಂಕ (ಆಂಟಿ ಡಂಪಿಂಗ್ ಡ್ಯೂಟಿ)ಯನ್ನು ವಿಧಿಸುತ್ತಿರುವುದಾಗಿ ಪ್ರಕಟಿಸಿದೆ.

ದೇಶೀಯ ಉದ್ಯಮಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಚೀನಾದಿಂದ ಆಮದಾಗುವ ಟೆಂಪರ್ಡ್ ಗ್ಲಾಸ್ ಗಳ ಮೇಲೆ ಟನ್ ಗೆ 52.85 ಡಾಲರ್ ಗಳಿಂದ 136.21 ಡಾಲರ್ ವರೆಗೆ ಸುಂಕವನ್ನು ವಿಧಿಸುವುದಾಗಿ ಹೇಳಿದೆ.

ಚೀನಾದಿಂದ ಆಮದಾಗುತ್ತಿರುವ ಟೆಂಪರ್ಡ್ ಗ್ಲಾಸ್ ಗಳು ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ಬರುತ್ತಿರುವುದಾಗಿ ಆ್ಯಂಟಿ ಡಂಪಿಂಗ್ ಅಂಡ್ ಅಲೈಡ್ ಡ್ಯೂಟೀಸ್(ಡಿಜಿಎಡಿ) ಡೈರೆಕ್ಟರೇಟ್ ಜನರಲ್ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ದೇಶೀಯ ಉದ್ಯಮಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಗಮನಿಸಿದ ಸರ್ಕಾರ, ಸ್ವದೇಶಿ ಉದ್ಯಮಗಳನ್ನು ರಕ್ಷಿಸಲೆಂದೇ ಆಮದು ನಿರೋಧಕ ಸುಂಕ ವಿಧಿಸುತ್ತಿರುವುದಾಗಿ ನೋಟಿಫಿಕೇಷನ್ ನಲ್ಲಿ ರೆವೆನ್ಯೂ ಇಲಾಖೆ ಹೇಳಿದೆ. ಮುಂದಿನ ಐದು ವರ್ಷಗಳ ಕಾಲ ಈ ಸುಂಕ ಜಾರಿಯಲ್ಲಿರಲಿದೆ.