41478871625_625x300

ಜಪಾನ್ ಜೊತೆ ಪರಮಾಣು ಒಪ್ಪಂದ

ಭಾರತದೊಂದಿಗೆ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಜಪಾನ್ ಶುಕ್ರವಾರ ಸಹಿ ಹಾಕಿದೆ. ಜಪಾನ್ ತನ್ನ ಪರಮಾಣು ತಂತ್ರಜ್ಞಾನ, ರಿಯಾಕ್ಟರ್‌ಗಳನ್ನು ರಫ್ತು ಮಾಡುವ ಮಾರ್ಗ ತೆರೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದು, ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆ ಭೇಟಿ ಮಾಡಿ ಚರ್ಚಿಸಿದರು. ಪರಮಾಣು ಒಪ್ಪಂದದ ಜೊತೆಗೆ ಮೂಲಸೌಕರ್ಯದಲ್ಲಿ ಜಪಾನ್ ಬಂಡವಾಳ ಹೆಚ್ಚಿಸಲು, ರೈಲ್ವೆ, ಏರೋಸ್ಪೇಸ್, ಕೃಷಿ ಕ್ಷೇತ್ರಗಳಲ್ಲಿ ಸಹಕಾರ ಇತ್ಯಾದಿ ಸಂಬಂಧಗಳನ್ನು ಬಲಪಡಿಸಲು 9 ಒಪ್ಪಂದಗಳು ಮಾಡಿಕೊಂಡರು. ಪರಮಾಣು ದಾಳಿಗೆ ತುತ್ತಾದ ಏಕೈಕ ದೇಶ ಜಪಾನ್ ನೊಂದಿಗೆ  ಆರು ವರ್ಷಗಳ ಮಾತುಕತೆ ನಂತರ ನಾಗರಿಕ ಪರಮಾಣು ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.

ಅಣುಶಕ್ತಿ ವಿಷಯದಲ್ಲಿ ಕಠಿಣ ನೀತಿ ಅನುಸರಿಸುವ ಜಪಾನ್, ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಹಾಕದಿದ್ದರೂ, ಶಾಂತಿಯುತ ಉದ್ದೇಶಗಳಿಗಾಗಿ, ಪರಮಾಣು ವಿದ್ಯುತ್ ಉದ್ದೇಶಗಳಿಗಾಗಿ ಇದನ್ನು ಬಳಸಲು ವಿನಾಯ್ತಿ ನೀಡಿ ಈ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ರಷ್ಯಾ, ದಕ್ಷಿಣ ಕೊರಿಯಾ, ಮಂಗೋಲಿಯಾ, ಫ್ರಾನ್ಸ್, ನಮೀಬಿಯಾ, ಅರ್ಜೆಂಟೀನಾ, ಕೆನಡಾ, ಕಝಾಕಿಸ್ತಾನ್, ಆಸ್ಟ್ರೇಲಿಯಾಗಳೊಂದಿಗೆ ಭಾರತ ಈಗಾಗಲೇ ಪರಮಾಣು ಒಪ್ಪಂದ ಮಾಡಿಕೊಂಡಿದೆ.

ಭೇಟಿಯ ನಂತರ ಮಾತನಾಡಿದ ಶಿಂಜೋ ಮತ್ತು ಮೋದಿ, ಶುದ್ಧ ಇಂಧನ ಪಾಲುದಾರಿಕೆಯ ನಿರ್ಮಾಣದ ಪ್ರಯತ್ನದಲ್ಲಿ ಈ ಒಪ್ಪಂದ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. ಈ ಕ್ಷೇತ್ರದಲ್ಲಿ ತಮ್ಮ ಸಹಕಾರ ಹವಾಮಾನ ಬದಲಾವಣೆಯ ಸಮಸ್ಯೆಯ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ ಎಂದು ಮೋದಿ ಹೇಳಿದರು. ಅಣ್ವಸ್ತ್ರ ಮುಕ್ತ ವಿಶ್ವ ನಿರ್ಮಾಣದ ತಮ್ಮ ಗುರಿಗೆ ಪೂರಕವಾಗಿ ಈ ಒಪ್ಪಂದವಿದ್ದು, ಈ ಒಪ್ಪಂದ ಮಾಡಿಕೊಂಡಿದ್ದಕ್ಕೆ ತಮಗೆ ಸಂತೋಷವಾಗಿದೆ ಎಂದು ಶಿಂಜೋ ಅಬೆ ಹೇಳಿದರು.

Related Post

error: Content is protected !!