ಚೀನಾಗೆ ಹೆದರಲು ಇದು 1962 ರ ಇಂಡಿಯಾ ಅಲ್ಲ – News Mirchi

ಚೀನಾಗೆ ಹೆದರಲು ಇದು 1962 ರ ಇಂಡಿಯಾ ಅಲ್ಲ

ಭಾರತೀಯ ಸೇನೆ ಇತಿಹಾಸದಿಂದ ಪಾಠ ಕಲಿಯಬೇಕು ಎಂದು 1962 ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧವನ್ನು ನೆನಪಿಸುತ್ತಾ ಚೀನಾ ನೀಡಿದ್ದ ಹೇಳಿಕೆಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ತೀಕ್ಷಣ ತಿರುಗೇಟು ನೀಡಿದ್ದಾರೆ. ಚೀನಾ ಈ ಹಿಂದೆ ನಡೆದಿದ್ದ ಘಟನೆಯನ್ನು ನಮಗೆ ನೆನಪಿಸುವ ಪ್ರಯತ್ನ ಮಾಡುತ್ತಿದೆ. ಆದರೆ 1962 ರಲ್ಲಿ ಇದ್ದ ಪರಿಸ್ಥಿತಿಗಳೇ ಬೇರೆ, 2017 ರಲ್ಲಿರುವ ಪರಿಸ್ಥಿತಿಗಳೇ ಬೇರೆ ಎಂದು ಹೇಳಿದ್ದಾರೆ.

ಇಂಡಿಯಾ ಟುಡೇ ಮಿಡ್ನೈಟ್ ಕಾಂಕ್ಲೇವ್ ನಲ್ಲಿ ನಲ್ಲಿ ಪಾಲ್ಗೊಂಡ ಜೇಟ್ಲಿ, ಭಾರತದ ಕುರಿತು ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ವಕ್ತಾರ ವು ಕಿಯನ್ ನೀಡಿರುವ ಹೇಳಿಕೆಗೆ ತಕ್ಕ ಉತ್ತರ ನೀಡಿದರು.

ಭೂತಾನ್ ಒಳಗೆ ಅಕ್ರಮವಾಗಿ ಪ್ರವೇಶಿಸಲು ಚೀನಾ ಪ್ರಯತ್ನಿಸುತ್ತಿದೆ ಎಂಬ ವಿಷಯವನ್ನು ಭೂತಾನ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಆದರೆ ಚೀನಾ ವಾಸ್ತವದ ಅಂಶಗಳನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ವಿಷಯದಲ್ಲಿ ಚೀನಾ ವರ್ತನೆ ಸರಿಯಲ್ಲ ಎಂದು ಅವರು ಹೇಳಿದರು.

ಪಾಕ್ ಜೊತೆಗೆ ಚೀನಾದಿಂದ ಎದುರಾಗುವ ಸವಾಲುಗಳನ್ನು ಏಕಕಾಲದಲ್ಲಿ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ ಅಧಿಕೃತ ವಕ್ತಾರ ಕಿಯನ್ ಪ್ರತಿಕ್ರಿಯಿಸಿ, ಇಂತಹ ಹೇಳಿಕೆ ನೀಡುವ ಮುನ್ನ ಭಾರತ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದ್ದರು.

Loading...