ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್’ಗಳ ಗೆಲುವು – News Mirchi

ಮಹಿಳಾ ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 95 ರನ್’ಗಳ ಗೆಲುವು

ಮಹಿಳಾ ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಭಾರತ ಪುರುಷರ ತಂಡದ ಸೋಲಿಗೆ ಸೇಡು ತೀರಿಸಿಕೊಂಡಂತಾಗಿದೆ. ವಿಶ್ವಕಪ್ ನಲ್ಲಿ ಮಹಿಳಾ ತಂಡ ಹ್ಯಾಟ್ರಿಕ್ ಗೆಲುವು ದಾಖಲಿಸಿರುವುದು ವಿಶೇಷ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಮಿಥಾಲಿ ಸೇನೆ, ಅದೇ ಆರ್ಭಟವನ್ನು ಮುಂದುವರೆಸುತ್ತಿದೆ. ಭಾನುವಾರ ನಡೆದ ಲೀಗ್ ಪಂದ್ಯದಲ್ಲಿ 95 ರನ್ ಅಂತರದಿಂದ ಪಾಕ್ ವಿರುದ್ಧ ಅಮೋಘ ಜಯ ಗಳಿಸಿತು. ಭಾರತದ ಬೌಲರ್ ಗಳಲ್ಲಿ ಸ್ಪಿನ್ನರ್ ಏಕ್ತಾ ಬಿಸ್ತ್ ಐದು ವಿಕೆಟ್ ಗಳನ್ನು ಪಡೆದಿದ್ದು, ಪಾಕ್ ಗೆ ಮುಳುವಾಯಿತು.

170 ರನ್ ಗಳ ಸಾಮಾನ್ಯ ಗುರಿಯೊಂದಿಗೆ ಬ್ಯಾಟಿಂಗ್ ಗೆ ಇಳಿದ ಪಾಕ್ ಮಹಿಳಾ ತಂಡ, ಒಂದು ರನ್ ಗೇ ತನ್ನ ಮೊದಲ ವಿಕೆಟ್ ಪತನ ಕಂಡಿತು. ಎರಡನೇ ಓವರ್ ನಾಲ್ಕನೇ ಎಸೆತಕ್ಕೆ ಏಕ್ತಾ ಬಿಸ್ತ್ ಬೌಲಿಂಗ್ ನಲ್ಲಿ ಆರಂಭಿಕ ಆಟಗಾರ್ತಿ ಅಯೇಷಾ ಜಫರ್ ಔಟಾದರು. ಅಲ್ಲಿಂದ ಪಾಕ್ ಪತನ ಶುರುವಾಯಿತು. 38.1 ಓವರ್ ಗಳಲ್ಲಿ 74 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು.

ಭಾರತದ ಬೌಲರ್ ಗಳಲ್ಲಿ ಗೋಸ್ವಾಮಿ, ದೀಪ್ತಿ ಶರ್ಮ, ಜೋಷಿ, ಹರ್ಮಿತ್ ಕೌರ್ ತಲಾ ಒಂದು ವಿಕೆಟ್ ಕಬಳಿಸಿದರು. ಅದಕ್ಕೂ ಮುನ್ನ ಬ್ಯಾಟಿಂಗ್ ಗೆ ಇಳಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಮಾಡಿತ್ತು. ಪೂನಮ್ ರಾವತ್(47), ದೀಪ್ತಿ ಶರ್ಮ(28, ಸುಷ್ಮಾ ವರ್ಮ(33) ರನ್ ಗಳಿಸಿದರು. ಕಳೆದೆರಡು ಪಂದ್ಯಗಳಲ್ಲಿ ಮಿಂಚಿದ ಸ್ಮೃತಿ ಮಧನ(2), ನಾಯಕಿ ಮಿಥಾಲಿ ರಾಜ್(8) ಅಭಿಮಾನಿಗಳನ್ನು ನಿರಾಸೆಗೊಳಿಸಿದರು.

Loading...