ಭಾರತ ತನ್ನ ಇತಿಹಾಸದಿಂದ ಪಾಠ ಕಲಿಯಲಿ: ಚೀನಾ

ಬೀಜಿಂಗ್: ಭಾರತ ತನ್ನ ಇತಿಹಾಸವನ್ನು(1962 ರಲ್ಲಲಿ ಚೀನಾದೊಂದಿಗಿನ ಯುದ್ಧ) ನೆನಪಿಸಿಕೊಳ್ಳಬೇಕು, ಕೂಡಲೇ ಸಿಕ್ಕಿಂನಲ್ಲಿನ ಡಾಂಗ್ಲಾಂಗ್ ಪ್ರದೇಶದಿಂದ ತನ್ನ ಸೈನಿಕರನ್ನು ಹಿಂತೆಗೆದುಕೊಳ್ಳಬೇಕು ಎಂದು ಚೀನಾ ಎಚ್ಚರಿಸಿದೆ. ಇಲ್ಲದಿದ್ದರೆ ಎರಡೂ ರಾಷ್ಟ್ರಗಳ ನಡುವೆ ಇರುವ ಗಡಿ ಸಮಸ್ಯೆಗಳ ಚರ್ಚೆ ಮುಂದುವರೆಯಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಚೀನಾ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಲುಕಾಂಗ್, ಭಾರತೀಯರು ಚೀನಾ ಭೂಪ್ರದೇಶದೊಳಗೆ ನುಸುಳಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಸಂಬಂಧಿಸಿದ ಕೆಲ ಫೋಟೋಗಳನ್ನು ಕೂಡಾ ಮಾಧ್ಯಮಗಳೆದುರು ಪ್ರದರ್ಶಿಸಿದರು.

ಈ ಫೋಟೋಗಳನ್ನು ತಮ್ಮ ಅಧಿಕೃತ ವೈಬ್ಸೈಟಿನಲ್ಲಿ ಕೂಡಾ ಲಭ್ಯವಾಗುವಂತೆ ಇಡುತ್ತೇವೆ ಎಂದು ಅವರು ಹೇಳಿದ್ದಾರೆ. ನಮ್ಮ ಭೂಪ್ರದೇಶದೊಳಗೆ ಭಾರತೀಯ ಸೈನಿಕರು ನುಸುಳಿದ್ದನ್ನು ಪತ್ತೆ ಹಚ್ಚುತ್ತಿದ್ದಂತೆಯೇ ದೆಹಲಿಯಲ್ಲಿನ ಭಾರತೀಯ ಅಧಿಕಾರಿಗಳಿಗೆ, ಬೀಜಿಂಗ್ ನಲ್ಲಿನ ಭಾರತೀಯ ರಾಯಭಾರಿ ಕಛೇರಿಗೆ ಈ ಮಾಹಿತಿ ನೀಡಿದ್ದೇವೆ ಎಂದರು.

ಗಡಿಯಲ್ಲಿರುವ ಭಾರತೀಯ ಸೇನೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇವೆ. ಮುಂದೆ ಯಾವುದೇ ಚರ್ಚೆ ಸುಸೂತ್ರವಾಗಿ ನಡೆಯಬೇಕೆಂದರೂ ನಾವು ಇಡುವ ಷರತ್ತು ಇದು. ಇದರ ಜೊತೆ ಭಾರತ ತನ್ನ ಇತಿಹಾಸದಿಂದ ತುಂಬಾ ಕಲಿಯಬೇಕು ಎಂದು 1962 ಭಾರತ ಚೀನಾಗಳ ನಡುವೆ ನಡೆದ ಯುದ್ಧವನ್ನು ಪರೋಕ್ಷವಾಗಿ ನೆನಪಿಸಿದ್ದಾರೆ.