ಪಾಕ್ ಗೆ ಭಾರತೀಯ ನಿಯೋಗ

***

ಭಾನುವಾರದಿಂದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನಲ್ಲಿ ನಡೆಯುವ 113 ನೇ ಶಾಶ್ವತ ಸಿಂಧೂ ಆಯೋಗ ಸಭೆಯಲ್ಲಿ ಪಾಲ್ಗೊಳ್ಳಲು 9 ಸದಸ್ಯರ ಭಾರತೀಯ ನಿಯೋಗ ಪಾಕಿಸ್ತಾನಕ್ಕೆ ತೆರಳಲಿದೆ. ಸಿಂಧೂ ನೀರಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಭಾರತಕ್ಕೆ ಪಾಕಿಸ್ತಾನವು ಅಹ್ವಾನ ನೀಡಿದೆ.

“ಸಿಂಧೂ ನೀರಿನ ಒಪ್ಪಂದ 1960” ರ ಗುರಿಗಳನ್ನು ನಿರ್ವಹಿಸಲು ಮತ್ತು ಕಾರ್ಯಗತಗೊಳಿಸಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳನ್ನೊಳಗೊಂಡು ಸೃಷ್ಟಿಸಿದ ದ್ವಿಪಕ್ಷೀಯ ಆಯೋಗವೇ ಶಾಶ್ವತ ಸಿಂಧೂ ಆಯೋಗ.

1960 ರಿಂದ ಇದುವರೆಗೂ 112 ಬಾರಿ ಶಾಶ್ವತ ಸಿಂಧೂ ಆಯೋಗದ ಸಭೆ ಸೇರಿದ್ದು, ಈಗ ಸಭೆ ಆಯೋಜಿಸುವ ಸರದಿ ಪಾಕಿಸ್ತಾನದ್ದು. ಮಾರ್ಚ್ 19 ರಿಂದ ಆರಂಭವಾಗಲಿರುವ ಸಭೆಗೆ ಪಾಕ್ ನೀಡಿರುವ ಆಹ್ವಾನವನ್ನು ಭಾರತದ ಕಮೀಷನರ್ ಅಂಗೀಕರಿಸಿದ್ದಾರೆ ಎನ್ನಲಾಗಿದೆ.