2030 ರ ವೇಳೆಗೆ ಭಾರತದಲ್ಲಿ ಕೇವಲ ಎಲೆಕ್ಟ್ರಿಕ್ ಕಾರುಗಳದ್ದೇ ಸಾಮ್ರಾಜ್ಯ – News Mirchi

2030 ರ ವೇಳೆಗೆ ಭಾರತದಲ್ಲಿ ಕೇವಲ ಎಲೆಕ್ಟ್ರಿಕ್ ಕಾರುಗಳದ್ದೇ ಸಾಮ್ರಾಜ್ಯ

ಭಾರತದಲ್ಲಿ 2030 ರ ವೇಳೆಗೆ ಕೇವಲ ವಿದ್ಯುತ್ ಚಾಲಿತ ಕಾರುಗಳು ಮಾತ್ರ ಮಾರಾಟವಾಗುತ್ತವೆ. ಮಾಲಿನ್ಯಕ್ಕೆ ಕಾರಣವಾಗುವ ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಆ ವೇಳೆಗೆ ಭಾರತ ವಿದಾಯ ಹೇಳಿರುತ್ತದೆಯಂತೆ. ಇದರಿಂದಾಗಿ ಪ್ರತಿವರ್ಷ 12 ಲಕ್ಷ ಜನ ಜೀವ ತೆಗೆಯುತ್ತಿರುವ ಮಾಲಿನ್ಯಕ್ಕೆ ಬ್ರೇಕ್ ಬೀಳಲಿದೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯತ್ತ ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಪರಿಸರವಾದಿಗಳು ಸ್ವಾಗತಿಸುತ್ತಿದ್ದಾರೆ.

ವಿಶ್ವದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸುವುದರಿಂದ ಹಲವಾರು ಪ್ರಯೋಜನಗಳಾಗುತ್ತವೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಪೆಟ್ರೋಲ್, ಡೀಸೆಲ್ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಇದೇ ವಿಷಯವನ್ನು ಹಣದ ರೂಪದಲ್ಲಿ ಹೇಳಬೇಕೆಂದರೆ ಪ್ರತಿ ವರ್ಷ 15 ಸಾವಿರ ಕೋಟಿ ಡಾಲರ್ ಮೌಲ್ಯದ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸುವ ಮೂಲಕ 2030 ರ ವೇಳೆಗೆ ಭಾರತ ಪ್ರತಿ ವರ್ಷ 6 ಸಾವಿರ ಕೋಟಿ ಡಾಲರ್ ಉಳಿತಾಯ ಮಾಡಬಹುದು. ಹಾಗೆಯೇ ಭಾರತದ ಕಾರು ಮಾಲೀಕರಿಗೂ ಪ್ರತಿ ವರ್ಷಾ ಕೋಟ್ಯಂತರ ರೂಪಾಯಿ ಖರ್ಚು ಉಳಿಯುತ್ತದೆ.

ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸಲು ಮೊದಲು ಎರಡು ಮೂರು ವರ್ಷಗಳು ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದ್ದು, ನಂತರ ಒಂದು ಪೈಸೆಯೂ ರಿಯಾಯಿತಿ ಇಲ್ಲದೆಯೇ ಬೇಡಿಕೆಯನುಸಾರ ಎಲೆಕ್ಟ್ರಿಕ್ ಕಾರುಗಳ ಉದ್ಯಮ ನೆಲೆ ಕಂಡುಕೊಳ್ಳಲಿದೆ. ಆ ನಂಬಿಕೆ ನಮಗಿದೆ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ.

ವಾಯು ಮಾಲಿನ್ಯದಿಂದಾಗಿ ಭಾರತದಲ್ಲಿ ಪ್ರತಿ ವರ್ಷ 12 ಲಕ್ಷ ಜನ ಸಾವನ್ನಪ್ಪುತ್ತಿದ್ದು, ಇದು ಧೂಮಪಾನದಿಂದಾಗಿ ಸಾವನ್ನಪ್ಪುತ್ತಿರುವವರಿಗಿಂತ ಸ್ವಲ್ ಕಡಿಮೆ ಎಂದು ಗ್ರೀನ್ ಪೀಸ್ ಸಂಸ್ಥೆ ಅಧ್ಯಯನವೊಂದರಲ್ಲಿ ಹೇಳಿದೆ. ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ 20 ನಗರಗಳನ್ನು ಗುರುತಿಸಿದ್ದು, ಅವುಗಳಲ್ಲಿ 13 ನಗರಗಳು ಭಾರತದಲ್ಲಿಯೇ ಇವೆ.

Loading...