ಅಮೆರಿಕಾ ಎಸೆದ ಬೃಹತ್ ಬಾಂಬ್ ಗೆ ಬಲಿಯಾದ ಐಸಿಸ್ ಸೇರಿದ್ದ ಕೇರಳದ ಯುವಕ?

ಐಸಿಸ್ ಸೇರಿದ್ದಾನೆ ಎನ್ನಲಾಗುತ್ತಿರುವ ಕೇರಳದ ಮತ್ತೊಬ್ಬ ವ್ಯಕ್ತಿ 23 ವರ್ಷದ ಮುರ್ಷೀದ್ ಮೊಹಮದ್ ಗುರುವಾರ ಅಮೆರಿಕಾ ಅಫ್ಘನಿಸ್ತಾನದಲ್ಲಿ ಬೃಹತ್ ಬಾಂಬ್ ಎಸೆದಿದ್ದ ಪ್ರದೇಶದಲ್ಲಿ ಹತ್ಯೆಯಾಗಿದ್ದಾನೆ. ಆದರೆ ಅಮೆರಿಕಾ ಬಾಂಬ್ ದಾಳಿಯಲ್ಲಿ ಆತ ಸಾವನ್ನಪ್ಪಿದನೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಗುರುವಾರ ಅಮೆರಿಕಾ ಜಿಬಿಯು-43 ಎಂಬ ಬಾಂಬುಗಳ ತಾಯಿ ಎಂದೇ ಕರೆಯಲ್ಪಡುವ ಬೃಹತ್ ಗಾತ್ರದ ಬಾಂಬನ್ನು ಐಸಿಸ್ ಅಡಗುತಾಣಗಳ ಮೇಲೆ ಎಸೆದಿತ್ತು. ಪರಮಾಣು ಬಾಂಬ್ ಹೊರತು ಪಡಿಸಿದರೆ ಸುಮಾರು 9,797 ಕೆಜಿ ತೂಕದ ಇದು ಶಕ್ತಿಶಾಲಿ ಬಾಂಬ್ ಆಗಿದೆ.

ಕೇರಳದ ಕಾಸರಗೋಡು ಬಳಿಯ ಪದ್ನಾ ಗ್ರಾಮದಲ್ಲಿ ವಾಸಿಸುತ್ತಿರುವ ಹತ್ಯೆಯಾದ ಮೊಹಮದ್ ನ ತಂದೆಗೆ, “ಮಗ ಹುತಾತ್ಮನಾಗಿದ್ದಾನೆ, ಮೊಹಮದ್ ತ್ಯಾಗಕ್ಕೆ ಕುಟುಂಬ ಹೆಮ್ಮೆ ಪಡಬೇಕು” ಎಂದು ಸಂದೇಶ ಬಂದಿದೆ. ಮೊಹಮದ್ ಜೊತೆಗೆ ಐಸಿಸ್ ಸೇರಿದ್ದ ಮತ್ತೊಬ್ಬ ವ್ಯಕ್ತಿ ಅಷ್ಫಾಕ್ ಅಹಮದ್ ನಿಂದ ಈ ಸಂದೇಶ ಬಂದಿದೆ ಎನ್ನಲಾಗಿದೆ. [ಆತ್ಮಗಳೊಂದಿಗೆ ಮಾತನಾಡುವ ಹುಚ್ಚು, ಕುಟುಂಬ ಸದಸ್ಯರನ್ನೇ ಹತ್ಯೆ ಮಾಡಿದ]

ಮಾಧ್ಯಮಗಳೊಂದಿಗೆ ಮೊಹಮದ್ ತಂದೆ ಮಾತನಾಡಲು ನಿರಾಕರಿಸಿದ್ದು, ಪೊಲೀಸರಿಗೆ ತಮಗೆ ಬಂದ ಸಂದೇಶವನ್ನು ತೋರಿಸಿದ್ದಾರೆ ಎನ್ನಲಾಗಿದೆ.

ಪದವೀಧರನಾಗಿದ್ದ ಮೊಹಮದ್, ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿದ್ದ. ಅಬು ದಾಬಿಯಲ್ಲಿ ತನ್ನ ತಂದೆಯ ವ್ಯಾಪಾರದಲ್ಲಿ ನೆರವಾಗಲು ಹೊರಟವನು ಕೇರಳಕ್ಕೆ ವಾಪಸಾಗುತ್ತಿರುವುದಾಗಿ ತನ್ನ ತಾಯಿಗೆ ಜೂನ್ 3 ರಂದು ಫೋನ್ ಮಾಡಿ ಹೇಳಿದ್ದ. ಆದರೆ ಆತ ವಾಪಸಾಗಿರಲಿಲ್ಲ.