ಭಾರತೀಯನಿಗೆ ಗಲ್ಲು ಶಿಕ್ಷೆ: ಪಾಕ್ ಗೆ ಭಾರತದ ಎಚ್ಚರಿಕೆ – News Mirchi

ಭಾರತೀಯನಿಗೆ ಗಲ್ಲು ಶಿಕ್ಷೆ: ಪಾಕ್ ಗೆ ಭಾರತದ ಎಚ್ಚರಿಕೆ

ಭಾರತದ ಗೂಢಚಾರನೆಂಬ ಆರೋಪದ ಮೇಲೆ ಕುಲಭೂಷಣ್ ಜಾಧವ್(46) ರವರಿಗೆ ಸೋಮವಾರ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಜಾದವ್ ಬೇಹುಗಾರಿಕೆ, ಪಾಕ್ ವಿರೋಧಿ ಚಟುವಟಿಕೆ ನಡೆಸುತ್ತಿದ್ದನೆಂಬುದು ಸಾಬೀತಾಗಿದೆ ಎಂದು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಕುಲಭೂಷಣ್ ಅವರನ್ನು ಅಪರಾಧಿ ಎಂದು ತೀರ್ಪು ನಿಡಿದೆ. ಆದರೆ ಪಾಕ್ ತೀರ್ಮಾನವನ್ನು ಭಾರತ ಖಂಡಿಸಿದೆ. ಜಾಧವ್ ಅವರಿಗೆ ಗಲ್ಲು ಶಿಕ್ಷೆ ಜಾರಿ ಮಾಡಿದರೆ ಪೂರ್ವಯೋಜಿತ ಹತ್ಯೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಭಾರತ ಎಚ್ಚರಿಸಿದೆ.

ಪಾಕ್ ಹೈಕಮೀಷನರ್ ಅಬ್ದುಲ್ ಅವರನ್ನು ಕರೆಸಿಕೊಂಡ ಭಾರತ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಈ ತೀರ್ಮಾನದ ಕುರಿತು ವಿರೋಧ ವ್ಯಕ್ತಪಡಿಸಿದರು. ಅತ್ತ ಬುಧವಾರ ಬಿಡುಗಡೆ ಮಾಡಬೇಕಿರುವ ಪಾಕಿಸ್ತಾನದ ಖೈದಿಗಳ ಬಿಡುಗಡೆಯನ್ನು ಭಾರತ ಸದ್ಯಕ್ಕೆ ತಡೆಹಿಡಿದಿದೆ. ಮರಣದಂಡನೆ ತೀರ್ಮಾನವನ್ನು ಚೀಫ್ ಜನರಲ್ ಕಮರ್ ಜಾವೇದ್ ಬುಜ್ವಾ ದೃಢಪಡಿಸಿದ್ದಾರೆ ಎಂದು ಪಾಕ್ ಮಿಲಿಟರಿ ಮಾಹಿತಿ ವಿಭಾಗ ಐ.ಎಸ್.ಪಿ.ಆರ್ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ತಾನು ಭಾರತದ ನೌಕಾಪಡೆಯ ಕಮಾಂಡರ್ ಎಂದು ಜಾದವ್ ಒಪ್ಪಿಕೊಂಡಿದ್ದಾರೆ ಎಂದು ಐ.ಎಸ್.ಪಿ.ಆರ್ ಹೇಳಿದೆ. ಆದರೆ ಭಾರತ ಹೇಳುತ್ತಿರುವುದೇ ಬೇರೆ. ಒತ್ತಾಯಪೂರ್ವಕವಾಗಿ ಜಾದವ್ ರಿಂದ ಪಾಕ್ ಅಧಿಕಾರಿಗಳು ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ. ಇರಾಕ್ ನಲ್ಲಿ ಜಾದವ್ ರವರನ್ನು ಬಂಧಿಸಿ ಪಾಕಿಸ್ತಾನದಲ್ಲಿ ಬಂಧಿಸಿರುವುಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ಭಾರತ ಆರೋಪಿಸಿದೆ.

ಕನಿಷ್ಟ ನ್ಯಾಯ ವಿಧಾನಗಳನ್ನು ಪಾಲಿಸದೆ ಜಾದವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಈ ಗಲ್ಲು ಶಿಕ್ಷೆ ಜಾರಿಯಾದರೆ ಪೂರ್ವಯೋಜಿತ ಹತ್ಯೆ ನಡೆಸಿದ್ದಾರೆ ಎಂದು ಪರಿಗಣಿಸಲಾಗುವುದು ಎಂದು ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಅವರಿಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಜಾದವ್ ಗೆ ನೀಡಿರುವ ಗಲ್ಲು ಶಿಕ್ಷೆ ಜಾರಿಯಾಗದಂತೆ ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಪಾಕ್ ಜೈಲಿನಲ್ಲಿ ಹತ್ಯೆಗೊಳಗಾದ ಸುರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಭಾರತದ ಜೈಲುಗಳಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪಾಕ್ ಖೈದಿಗಳಿಗೂ ನಾವು ಇಂತದ್ದೇ ಶಿಕ್ಷೆಗಳನ್ನು ವಿಧಿಸುತ್ತಿದ್ದೇವಾ ಎಂದು ಅವರು ಪ್ರಶ್ನಿಸಿದ್ದಾರೆ.

Contact for any Electrical Works across Bengaluru

Loading...
error: Content is protected !!