ಮಹಿಳೆಯರ ಏಷ್ಯಾ ಕಪ್ ಫೈನಲ್: ಪಾಕ್ ವಿರುದ್ಧ ಭಾರತಕ್ಕೆ ಜಯ – News Mirchi

ಮಹಿಳೆಯರ ಏಷ್ಯಾ ಕಪ್ ಫೈನಲ್: ಪಾಕ್ ವಿರುದ್ಧ ಭಾರತಕ್ಕೆ ಜಯ

ಬ್ಯಾಂಕಾಕ್: ಮಹಿಳೆಯರ ಏಷ್ಯಾ ಕಪ್ ಟಿ20 ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 17 ರನ್ ಅಂತರದಿಂದ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತ ನೀಡಿದ್ದ 122 ರನ್ ಗಳ ಗುರಿಯನ್ನು ಬೆನ್ನಟ್ಟಿದ ಪಾಕ್, ಕೊನೆಗೆ ಸೋಲೊಪ್ಪಿಕೊಂಡಿದೆ.

ಪಾಕ್ ಆಟಗಾರ್ತಿಯರಲ್ಲಿ ಅಯೇಷಾ ಜಾಫರ್(15), ಜಾವಿರಿಯಾ ಖಾನ್(22), ಬಿಸ್ಮಾ ಮರೂಫ್(25) ಸಾಧಾರಣ ಆಟವಾಡಿದರು, ಉಳಿದವರು ವಿಫಲವಾದ್ದರಿಂದ ಸೋಲು ತಪ್ಪಲಿಲ್ಲ.

ಸುಮಾರು ಹತ್ತು ಓವರ್ ಗಳವರೆಗೂ ಪಂದ್ಯ ಪಾಕ್ ಕಡೆ ವಾಲಿದ್ದರೂ, ಕೊನೆಯ ಓವರ್ ಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಜಯಗಳಿಸಿತು. ಕೊನೆಯ ಎರಡು ಓವರ್ ಗಳಲ್ಲಿ ಪಾಕಿಸ್ತಾನ 32 ಗಳಿಸಬೇಕಿತ್ತು. ಆದರೆ ಅದು ಕಷ್ಟಸಾಧ್ಯವಾಗಿತ್ತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ ಸೋಲುಂಡಿತು. ಭಾರತದ ಬೌಲರ್ ಗಳಲ್ಲಿ ಏಕ್ತಾ ಬಿಸ್ತ್ ಎರಡು ವಿಕೆಟ್, ಅನೂಜಾ ಪಟೇಲ್, ಜುಲಾನ್ ಗೋಸ್ವಾಮಿ, ಶಿಖಾ ಪಾಂಡೇ, ಪ್ರೀತಿ ಬೋಸ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ನಿಗಧಿತ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿತು. ಭಾರತದ ಓಪನರ್ ಮಿಥಾಲಿ ರಾಜ್(73 ಅಜೇಯ, 65 ಎಸೆತಗಳಲ್ಲಿ 7 ಫೋರ್, 1 ಸಿಕ್ಸ್) ಏಕಾಂಗಿ ಹೋರಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಿಥಾಲಿ ರಾಜ್ ಗೆ ಸಾಥ್ ನೀಡಿದ ಜುಲಾನ್ ಗೋಸ್ವಾಮಿ(17) ರನ್ ಗಳಿಸಿದರು.

ಇದುವರೆಗೂ ನಡೆದ 6 ಏಷ್ಯಾ ಕಪ್ ಮಹಿಳಾ ಟೂರ್ನಿಗಳಲ್ಲಿ ಆರರಲ್ಲೂ ಭಾರತ ಗೆದ್ದಿರುವುದು ವಿಶೇಷ.

Loading...

Leave a Reply

Your email address will not be published.