ಭಾರತ, ಚೀನಾ ವಿರುದ್ಧ ಮತ್ತೆ ಆಕ್ರೋಶಗೊಂಡ ಟ್ರಂಪ್

ಹಿಂದೂಗಳಿಗೆ ತಾನೊಬ್ಬ ದೊಡ್ಡ ಅಭಿಮಾನಿ, ಭಾರತವೆಂದರೆ ಇಷ್ಟ ಎಂದು ಮತದಾರರನ್ನು ಓಲೈಸಲು ಹೇಳಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈಗ ತಮ್ಮ ನಿಜ ರೂಪ ಪ್ರದರ್ಶಿಸಿದ್ದಾರೆ. ಭಾರತ, ಚೀನಾ, ಮೆಕ್ಸಿಕೋ, ಸಿಂಗಾಪುರ ದೇಶಗಳು ಅಮೆರಿಕನ್ನರ ಉದ್ಯೋಗಗಳನ್ನು ಕಸಿಯುತ್ತಿದ್ದಾರೆಂದು ಆರೋಪಿಸಿದರು.

ವರ್ಲ್ಡ್ ಟ್ರೇಡ್ ಆರ್ಗನೈಸೇಷನ್ ಗೆ ಚೀನಾ ಪ್ರವೇಶಿಸಿದ ನಂತರ ಅಮೆರಿಕಾ 70 ಸಾವಿರ ಫ್ಯಾಕ್ಟರಿಗಳನ್ನು ಕಳೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಬಿಲ್ ಕ್ಲಿಂಟನ್ ಮತ್ತು ಹಿಲರಿ ಕ್ಲಿಂಟನ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾವು ಕಳೆದುಕೊಂಡಷ್ಟು ಉದ್ಯೋಗಗಳನ್ನು ಬೇರೆ ಯಾವ ದೇಶವೂ ಕಳೆದುಕೊಂಡಿಲ್ಲ, ಈ ಸಮಸ್ಯೆಯನ್ನು ತಾವು ಅಧಿಕಾರಕ್ಕೆ ಬಂದರೆ ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಗುಡ್‌ರಿಚ್ ಲೈಟಿಂಗ್ಸ್ ಸಿಸ್ಟಮರ್ಸ್ 255 ಉದ್ಯೋಗಿಗಳನ್ನು ಕೈಬಿಟ್ಟು ಅವರ ಉದ್ಯೋಗಗಳನ್ನು ಭಾರತಕ್ಕೆ ನೀಡಿದೆ, ಬಾಕ್ಸ್‌ಟರ್ ಹೆಲ್ತ್ ಕೇರ್ ಕಾರ್ಪೊರೇಷನ್ 199 ಉದ್ಯೋಗಿಗಳನ್ನು ಕೈಬಿಟ್ಟು ಆ ಉದ್ಯೋಗಗಳನ್ನು ಸಿಂಗಾಪುರಕ್ಕೆ ನೀಡಿದೆ ಎಂದು ಆರೋಪಿಸಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರೆ ಇಲ್ಲಿಯವರೆಗೂ ಅಮೆರಿಕ ಕಳೆದುಕೊಂಡ ಉದ್ಯೋಗಗಳನ್ನು ವಾಪಸ್ ತರುತ್ತೇನೆ ಎಂದು ಭರವಸೆ ನೀಡಿದರು.