ಶವಗಳನ್ನು ಹೊರತೆಗೆದು ಸಿಂಗರಿಸಿ ಮೆರವಣಿಗೆ, ಇಲ್ಲಿದೆ ಮತ್ತಷ್ಟು ವಿಚಿತ್ರ ಆಚರಣೆಗಳು |News Mirchi

ಶವಗಳನ್ನು ಹೊರತೆಗೆದು ಸಿಂಗರಿಸಿ ಮೆರವಣಿಗೆ, ಇಲ್ಲಿದೆ ಮತ್ತಷ್ಟು ವಿಚಿತ್ರ ಆಚರಣೆಗಳು

ನಮಗಿಷ್ಟವಾದವರು ಸಾವನ್ನಪ್ಪಿದರೆ ಅದರಿಂದಾಗುವ ನೋವನ್ನು ಹೇಳತೀರದು. ಅವರ ಮೇಲಿನ ಪ್ರೀತಿಯನ್ನು ದಾನ ಧರ್ಮಗಳನ್ನು ಮಾಡುವ ಮೂಲಕ ತೋರ್ಪಡಿಸುತ್ತೇವೆ. ಆದರೆ ಇಂಡೋನೇಷಿಯಾದ ಗ್ರಾಮವೊಂದರಲ್ಲಿ ವಾಸಿಸುವ ಬುಡಕಟ್ಟು ಜನರು ಮಾತ್ರ ವಿಚಿತ್ರ ಆಚರಣೆಯನ್ನು ಪಾಲಿಸುತ್ತಾ ಬರುತ್ತಿದೆ.

ಇಂಡೋನೇಷಿಯಾದ ದಕ್ಷಿಣ ಸುಲಾವೆಸಿ ಎಂಬ ಗ್ರಾಮದಲ್ಲಿನ ಬುಡಕಟ್ಟು ಜನರು ಸತ್ತವರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಆತ್ಮೀಯರು ಸತ್ತ ನಂತರ ಹೂಳುವ ಮುನ್ನ ವಾರಗಟ್ಟಲೆ ತಮ್ಮ ಮನೆಗಳಲ್ಲಿ ಇರಿಸಿಕೊಳ್ಳುತ್ತಾರೆ.

ಒಮ್ಮೆ ಮೃತದೇಹಗಳನ್ನು ಮಣ್ಣು ಮಾಡಿದ ನಂತರವೂ ಅವುಗಳನ್ನು ಹಾಗೆಯೇ ಬಿಡುವುದಿಲ್ಲ. ಆಗಾಗ ಅವುಗಳನ್ನು ಹೊರತೆಗೆದು ನೀಟಾಗಿ ತಲೆ ಕೂದಲು ಕತ್ತರಿಸಿ ಮುದ್ದಿಸಿ, ಹೊಸ ಬಟ್ಟೆ ತೊಡಿಸಿ ಸಂಭ್ರಮಿಸುತ್ತಾರೆ.

ಟೊರಾಜಾನ್ ಬುಡಕಟ್ಟಿನ ಮಾರ್ಟೆನ್ ಲಾಬಿ ತನ್ನ ತಾಯಿಯ ಯೊಹಾನಾ ಲಿಲಿಂಗ್ ಶವವನ್ನು ಹೊರತೆಗೆದು ಕೂದಲು ಕತ್ತರಿಸಿ ವಾರ್ಷಿಕ ಉತ್ಸವಕ್ಕೆ ಸಿಂಗಾರಗೊಳಿಸುತ್ತಿರುವುದು. ಲಿಲಿಂಗ್ 1997 ರಲ್ಲಿ ಸಾವನ್ನಪ್ಪಿದ್ದಳು, ಆದರೆ ಆ ಕುಟುಂಬದ ಸದಸ್ಯರು ಮಾತ್ರ ಆಗಾಗ ನಡೆಯುವ ಬುಟಕಟ್ಟು ಸಾಂಪ್ರದಾಯಿಕ ಉತ್ಸವಗಳ ನೆಪದಲ್ಲಿ ಆಕೆಯ ಶವವನ್ನು ನೋಡುತ್ತದೆ.

ತಮ್ಮ ಹಿರಿಯರ ಶವಗಳ ಉತ್ಸವದ ಸಂದರ್ಭದಲ್ಲಿ ಶವಗಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಸಿಂಗರಿಸುತ್ತಾರೆ. ಶವ ಗಂಡಸರದ್ದಾದರೆ ಸಿಗರೇಟ್ ನೀಡಲಾಗುತ್ತದೆ. ಕೆಲವೊಮ್ಮೆ ಅವರಿಗಿಷ್ಟವಾದ ಆಹಾರಗಳನ್ನೂ ಅರ್ಪಿಸಲಾಗುತ್ತದೆ. ನಂತರ ಸಿಂಗಾರಗೊಂಡ ಶವಗಳನ್ನು ಹಳ್ಳಿಯ ಸುತ್ತಲೂ ಮೆರವಣಿಗೆ ಮಾಡಿಸುತ್ತಾರೆ. ಫಾರ್ಮಾಲ್ಡಿಹೈಡ್ ದ್ರಾವಣವನ್ನು ಬಳಸಿ ಶವಗಳನ್ನು ಸಂರಕ್ಷಿಸಲಾಗುತ್ತದೆ.

ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಿರುವ ಈ ಶವ ರ್ಯಾಪಾಂಗ್ ಎಂಬ ಮಹಿಳೆಯದ್ದು. ಈಕೆ 1990 ರಲ್ಲಿ ಸಾವನ್ನಪ್ಪಿದ್ದಳು. ಇಲ್ಲಿನ ಟೊರಾಜಾನ್ ಬುಡಕಟ್ಟು ಜನರು ಸತ್ತವರನ್ನು ಹೂಳುವವರೆಗೂ ಸತ್ತಿದ್ದಾರೆ ಎಂದು ಭಾವಿಸುವುದಿಲ್ಲ. ಸತ್ತ ನಂತರ ಶವಗಳನ್ನು ಕೆಲ ವಾರಗಳು, ತಿಂಗಳುಗಳು, ಕೆಲವೊಮ್ಮೆ ಸತ್ತ ನಂತರ ವರ್ಷಗಳೇ ತಮ್ಮ ಮನೆಯಲ್ಲಿಟ್ಟುಕೊಂಡು ಖಾಯಿಲೆಗೊಳಗಾದವರನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ.

ಟೊರಾಜಾನ್ ಬುಡಕಟ್ಟು ವ್ಯಕ್ತಿ ಸತ್ತ ನಂತರ ಮಣ್ಣಿನಲ್ಲಿ ಹೂತರೂ, ಅವರ ಕುಟುಂಬ ಸದಸ್ಯರಿಗೆ ಶವದೊಂದಿಗಿನ ಸಂಬಂಧ ಕಡಿದುಹೋಗುವುದಿಲ್ಲ. ಆಗಾಗ ವಿಶೇಷ ಸಂದರ್ಭಗಳಲ್ಲಿ ಹೊರಗೆ ತೆಗೆದು ಅವರಿಗಿಷ್ಟವಾದ ವಸ್ತುಗಳನ್ನು ಅರ್ಪಿಸುತ್ತಾರೆ.

ಉತ್ಸವಗಳ ಸಂದರ್ಭಗಳಲ್ಲಿ ಸೋಂಕುಗಳ ಭಯವಿರುತ್ತದಾದರೂ, ಅವರ ಸಂಭ್ರಮದ ಎದುರು ಅವು ಗಣನೆಗೆ ಬರುವುದಿಲ್ಲ. ಇಲ್ಲಿ ಉತ್ಸವದ ಸವಿನೆನಪಿಗಾಗಿ ಸತ್ತ ವ್ಯಕ್ತಿಯ ಸಂಬಂಧಿಕರು ಸಿಂಗಾರಗೊಂಡ ಶವದೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ.

ಇಲ್ಲಿ ಕಾಣುತ್ತಿರುವ ಟೊರಾಜಾನ್ ಬುಡಕಟ್ಟು ಜನಾಂಗದ ವ್ಯಕ್ತಿಯ ಶವದ ಪಕ್ಕದಲ್ಲಿ ಆತ ಬದುಕಿದ್ದಾಗ ತೆಗೆದಿದ್ದ ಫೋಟೋ ನೋಡಬಹುದು. 1900 ರವರೆಗೂ ಅವರಿಗೆ ಲಿಖಿತ ಭಾಷೆ ಇಲ್ಲದ ಕಾರಣ ಈ ವಿಚಿತ್ರ ಸಂಪ್ರದಾಯ ಯಾವಾಗ ಆರಂಭವಾಯಿತು ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.

ಡಚ್ ಸಂಶೋಧಕರು ಇಲ್ಲಿಗೆ ಆಗಮಿಸಿದ ನಂತರ ಬುಡಕಟ್ಟು ಜನರು ಕೆಲ ಕ್ರೈಸ್ತ ಸಂಪ್ರದಾಯಗಳನ್ನು ಮಿಶ್ರಣ ಮಾಡಿ ಆಚರಿಸುತ್ತಿದ್ದಾರೆ. ಆಗಾಗ ಕ್ರೈಸ್ತರ ಪ್ರಾರ್ಥನೆಗಳನ್ನು ಮಾಡುವುದೂ ಉಂಟು.

ಶವಪೆಟ್ಟಿಗೆಗಳನ್ನು ಹೊರತೆಗೆದ ನಂತರ ಶವಗಳನ್ನು ಅವುಗಳಿಂದ ಹೊರತೆಗೆಯಲಾಗುತ್ತದೆ. ಸ್ವಲ್ಪ ಹೊತ್ತು ಸೂರ್ಯನ ಬೆಳಕಲ್ಲಿ ಒಣಗಲು ಬಿಡುತ್ತಾರೆ. ನಂತರ ಸಿಂಗರಿಸಿ ಉತ್ಸವ ನಡೆಸುತ್ತಾರೆ. ಮೆರವಣಿಗೆ ನಂತರ ಹಂದಿಗಳನ್ನು ಬಲಿ ನೀಡುತ್ತಾರೆ. ಹೀಗೆ ಮಾಡುವುದರಿಂದ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಟೊರಾಜಾನ್ ಗಳ ನಂಬಿಕೆ

ಸತ್ತವರಿಗೆ ಗೌರವ ಸಲ್ಲಿಸುವುದಕ್ಕೆ ಈ ಉತ್ಸವಗಳು ಒಂದು ಮಾರ್ಗ ಎಂದು ಬುಡಕಟ್ಟು ಜನರು ಹೇಳುತ್ತಾರೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!