ಮೈಸೂರಿನಲ್ಲಿ ಐತಿಹಾಸಿಕ ಯೋಗ ದಿನಾಚರಣೆ

3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನ ವಿಸ್ತಾರವಾದ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ಅತಿ ದೊಡ್ಡ ಸಾಮೂಹಿಕ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು. ರೇಸ್ ಕೋರ್ಸ್ ರಸ್ತೆಗೆ ಹೊಂದಿಕೊಂಡಿರುವ ರಸ್ತೆಗಳೆಲ್ಲವೂ ಬಿಳಿ ವಸ್ತ್ರಗಳನ್ನು ಧರಿಸಿ ಯೋಗಾ ಮ್ಯಾಟ್ ಹೊತ್ತು ಬರುತ್ತಿರುವವರಿಂದ ತುಂಬಿದ್ದವು. ಮೈಸೂರಿನ ನಾಗರಿಕರು ಗಿನ್ನಿಸ್ ದಾಖಲೆಗೆ ಕಾರಣವಾಗಲಿರುವ ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ತುಂಬಾ ಉತ್ಸುಕರಾಗಿ ಆಗಮಿಸಿದ್ದರು.

ಬೆಳಗ್ಗೆ 7:30 ರಿಂದ ಒಂದು ಗಂಟೆ ಕಾಲ ಯೋಗ ಪ್ರದರ್ಶನ ನಡೆಯಿತು. ಯೋಗ ಗುರುಗಳ ಮಾರ್ಗದರ್ಶನದಲ್ಲಿ 19 ಆಸನಗಳ ಪ್ರದರ್ಶನ ನಡೆಯಿತು. 2015 ರಲ್ಲಿ ದೆಹಲಿಯ ರಾಜಪಥದಲ್ಲಿ ಸುಮಾರು 35,985 ಜನರು ಪಾಲ್ಗೊಂಡ ಯೋಗ ದಿನಾಚರಣೆ ಇದುವರೆಗೆ ಗಿನ್ನಿಸ್ ದಾಖಲೆಯಾಗಿತ್ತು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್ ಸಿಂಗ್, ಮೇಯರ್ ರವಿಕುಮಾರ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಸ್.ಎಲ್.ಭೈರಪ್ಪ ಮುಂತಾದವರು ಭಾಗವಹಿಸಿದ್ದರು. 500 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಈ ಐತಿಹಾಸಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಗಿನ್ನಿಸ್ ದಾಖಲೆಗಾಗಿ ಆಯೋಜಿಸಿದ್ದ ಇಂದಿನ ಕಾರ್ಯಕ್ರಮದಲ್ಲಿ ಸುಮಾರು 45000 ಜನ ಸೇರಿದ್ದರು ಜಿಲ್ಲಾಧಿಕಾರಿ ರಣದೀಪ್ ಅವರು ಹೇಳಿದ್ದರೆ, 60000 ಮೀರಿರಬಹುದು ಎಂದು ಸಚಿವ ಮಹದೇವಪ್ಪ ಅಂದಾಜಿಸಿದ್ದಾರೆ. ಶೀಘ್ರದಲ್ಲೇ ಭಾಗವಹಿಸಿದ್ದ ಜನರ ನಿಖರ ಸಂಖ್ಯೆ ತಿಳಿಯುತ್ತದೆ ಎನ್ನಲಾಗಿದೆ. ಯೋಗ ಪ್ರದರ್ಶನವನ್ನು ಡ್ರೋಣ್ ಗಳಿಂದ ಚಿತ್ರೀಕರಿಸಲಾಗಿದ್ದು, ಗಿನ್ನಿಸ್ ದಾಖಲೆಗಾಗಿ ಅವುಗಳನ್ನು ಪುರಾವೆಯಾಗಿ ಕಳುಹಿಸಿಕೊಡಲಾಗುತ್ತದೆ.