ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಕೊಲ್ಲಲು ಪಾಕ್ ಸಂಚು?

ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಿ ಕೊಲ್ಲಬೇಕು ಎಂದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ, ಉಗ್ರ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಗೆ ಸೂಚಿಸಿದೆ. ಈಗಾಗಲೇ ಕೊಲ್ಲಬೇಕಾದವರ ಪಟ್ಟಿಯೂ ಸಿದ್ಧಪಡಿಸಿದ್ದಾರೆ ಎಂದು ಭಾರತದ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳು ಹೇಳುತ್ತಿದ್ದಾರೆ.

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪಾಕ್ ಈ ತಂತ್ರಕ್ಕೆ ಮುಂದಾಗಿದೆ. ಉಗ್ರ ಬುರ್ಹಾನ್ ವಾಣಿಯನ್ನು ಕೊಂದ ನಂತರ ಕಾಶ್ಮೀರ ಕಣಿವೆಯಲ್ಲಿ ಕಳೆದ ಜುಲೈ ನಿಂದ ಅಶಾಂತಿ ನೆಲೆಸಿತ್ತು. ಆದರೆ ಆ ಸಮಯದಲ್ಲಿ ಬುರ್ಹಾನ್ ವಾಣಿ ಹತ್ಯೆ ನೆಪದಲ್ಲಿ ಇನ್ನೂ ಹೆಚ್ಚಿನ ಹಿಂಸೆ ಸೃಷ್ಟಿಸಬಹುದಿತ್ತು ಎಂಬುದು ಪಾಕ್ ಉಗ್ರ ನಾಯಕರ ಅಭಿಪ್ರಾಯ. ಹೀಗಾಗಿಯೇ ಈ ಬಾರಿ ಪ್ರತ್ಯೇಕವಾದಿಗಳಲ್ಲೇ ಕೆಲವರನ್ನು ಮುಗಿಸಿ ಇನ್ನೂ ಹೆಚ್ಚಿನ ಹಿಂಸೆ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಕಾಶ್ಮೀರದಲ್ಲಿ ಹೆಚ್ಚು ರಕ್ತಪಾತ ಆಗುವಂತೆ ಲಷ್ಕರ್ ಎ ತೊಯ್ಬಾ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿ ಒಂದು ಯೋಜನೆ ರೂಪಿಸಿದ್ದ, ಆದರೆ ಲಷ್ಕರ್ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಯೋಜನೆಯನ್ನು ಬದಿಗಿಟ್ಟು ತನ್ನದೇ ಯೋಜನೆಯಂತೆ ನಡೆದಿದ್ದ.

ಈಗ ಈ ಇಬ್ಬರೂ ಉಗ್ರ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ(ಐಎಸ್ಐ) ಕಣಕ್ಕಿಳಿದಿದೆ. ಕಾಶ್ಮೀರ ಪ್ರತ್ಯೇಕವಾದಿಗಳಲ್ಲಿ ಕೆಲವರನ್ನು ಹತ್ಯೆ ಮಾಡಿ ಹೆಚ್ಚು ರಕ್ತಪಾತ ಸೃಷ್ಟಿಸಿದರೆ, ಕನಿಷ್ಟ ಒಂದು ವರ್ಷದವರೆಗೂ ಅಲ್ಲಿ ಅಶಾಂತಿ ನೆಲೆಸುತ್ತದೆ ಎಂಬುದು ಐಎಸ್ಐ ಮಾಸ್ಟರ್ ಪ್ಲಾನ್.