ನೋಟು ರದ್ದು: ಸರ್ಕಾರದ ಪ್ರಮುಖರಿಗೇ ಗೊತ್ತಿರಲಿಲ್ಲ

ಹಳೆಯ ಕರೆನ್ಸಿ ನೋಟು ರದ್ದು ಮಾಡಿ ಮಂಗಳವಾರ ರಾತ್ರಿ ಪ್ರಕಟಿಸಿದ ನಂತರ ರಿಸರ್ವ್ ಬ್ಯಾಂಕ್, ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ದೆಹಲಿಯಲ್ಲಿ ಪ್ರಮುಖ ಸಭೆ ಸೇರಿದರು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಮಾತ್ರವಲ್ಲದೇ ಆರ್ಥಿಕ ಸ್ವಾವಲಂಬನೆ ಸಾಧಿಸಲೆಂದೇ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟು ರದ್ದು ಮಾಡಿ ಹೊಸ ನೋಟು ತರುತ್ತಿರುವುದಾಗಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ನವೆಂಬರ್ 10(ಗುರುವಾರ) ದಿಂದ ಹೊಸ ರೂ. 500, ರೂ. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡಲು ರಿಜರ್ವ್ ಬ್ಯಾಂಕ್ ಶ್ರಮಿಸುತ್ತಿದ್ದು, ವಿಶ್ರಾಂತಿ ಇಲ್ಲದೆ ನೋಟು ಮುದ್ರಿಸುತ್ತಿದ್ದೇವೆ ಎಂದು ಹೇಳಿದರು. ಹಳೆಯ ನೋಟು ರದ್ದು ಮಾಡಿದ್ದರಿಂದಾಗಿ ಹೋಲ್ ಸೇಲ್ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.

ಸರ್ಪ್ರೈಸ್: ಸರ್ಕಾರದ ಹಿರಿಯ ನಾಯಕರಿಗೇ ಗೊತ್ತಿರಲಿಲ್ಲ

ಹಳೆಯ ನೋಟುಗಳ ರದ್ದು ಕುರಿತ ಕೇಂದ್ರದ ತೀರ್ಮಾನವನ್ನು ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಕುತೂಹಲಕರ ಹೇಳಿಕೆ ನೀಡಿದರು. ಕೇಂದ್ರದ ಈ ತೀರ್ಮಾನದ ಕುರಿತು ಪ್ರಧಾನ ಮಂತ್ರಿ, ಹಣಕಾಸು ಸಚಿವ, ಆರ್‌ಬಿಐ ನ ಕೆಲವೇ ಜನರಿಗೆ ಹೊರತುಪಡಿಸಿ ಸರ್ಕಾರದ ಹಿರಿಯ ಸಚಿವರಿಗೂ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ. ನೋಟು ರದ್ದು ವಿಷಯವನ್ನು ಪ್ರಕಟಿಸುವವರೆಗೂ ತುಂಬಾ ರಹಸ್ಯವಾಗಿ ಇಡಲಾಗಿತ್ತು ಎಂದು ಶಕ್ತಿಕಾಂತ್ ಹೇಳಿದ್ದಾರೆ.

ಬ್ಯಾಂಕ್, ಅಂಚೆ ಕಛೇರಿ ಮೂಲಕ ಹಳೆಯ ನೋಟುಗಳನ್ನು ಸಂಗ್ರಹಿಸುತ್ತೇವೆ, ಇದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಆದೇಶ ಜಾರಿ ಮಾಡುತ್ತೇವೆ ಎಂದರು. ಬುಧವಾರ ಬ್ಯಾಂಕುಗಳನ್ನು ಮುಚ್ಚುತ್ತೇವೆ, ಗುರುವಾರ ಹೊಸ ಕರೆನ್ಸಿ ನೋಟುಗಳು ಚಲಾವಣೆಗೆ ಲಭ್ಯವಿರುತ್ತದೆ ಎಂದು ಸ್ಪಷ್ಟ ಪಡಿಸಿದರು.