ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರಕ್ಕೆ ಶೆಟ್ಟರ್ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ರೈತರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀರಜ್ ಅವರ ನೇತೃತ್ವದ ಕೇಂದ್ರ ತಂಡದ ಸಭೆಯ ನಂತರ ಮಾತನಾಡಿದ ಶೆಟ್ಟರ್, ಬರಪೀಡಿತ ಪ್ರದೇಶಗಳ ರೈತರ ಕಷ್ಟಗಳನ್ನು ಕೇಂದ್ರ ತಂಡಕ್ಕೆ ವಿವರಿಸಿದ್ದಾಗಿ ಹೇಳಿದರು.

ಬೆಳೆ ನಷ್ಟದಿಂದ ಕಂಗಾಲಾಗಿ 2013 ರಿಂದ ಈಚೆಗೆ ಸುಮಾರು 2,000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ನೆರವಿಗೆ ಮುಂದಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕೇಂದ್ರದ ತಂಡಕ್ಕೆ ಮನವಿ ಮಾಡಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.