ಕಾರಾಗೃಹದಲ್ಲಿ ಭ್ರಷ್ಟಾಚಾರ: ತನಿಖಾ ವರದಿ ಸಲ್ಲಿಕೆಗೆ ಮತ್ತಷ್ಟು ಕಾಲಾವಕಾಶ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಅಂದಿನ ಡಿಐಜಿ(ಕಾರಾಗೃಹ) ರೂಪಾ ರವರು ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರು ಮತ್ತಷ್ಟು ಸಮಯ ಕೇಳಿದ್ದಾರೆ.

ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಅವರಿಗೆ ರಾಜಾತಿಥ್ಯ ನೀಡಲು ಜೈಲು ಅಧಿಕಾರಿಗಳಿಗೆ 2 ಕೋಟಿ ಲಂಚ ಸಂದಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಅಂದಿನ ಡಿಐಜಿ ರೂಪಾ ಆರೋಪಿಸಿದ್ದರು.

ರೂಪಾ ರವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 17 ರಂದು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಬೇಕಿತ್ತು. ಆದರೆ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿನಯ್ ಕುಮಾರ್ ಅವರು ಇನ್ನೂ 15 ದಿನಗಳ ಕಾಲಾವಕಾಶ ಕೇಳಿದ್ದು, ಸರ್ಕಾರ ಒಪ್ಪಿಗೆ ನೀಡಿದೆ.