100 ಕೋಟಿ ಆಸ್ತಿ, 3 ವರ್ಷದ ಮಗು ತೊರೆದು ಸನ್ಯಾಸಿಗಳಾಗಲು ಹೊರಟ ದಂಪತಿ – News Mirchi

100 ಕೋಟಿ ಆಸ್ತಿ, 3 ವರ್ಷದ ಮಗು ತೊರೆದು ಸನ್ಯಾಸಿಗಳಾಗಲು ಹೊರಟ ದಂಪತಿ

ಹಣವೊಂದಿದ್ದರೆ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿಕೊಳ್ಳಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಹಣವಿಲ್ಲದಿದ್ದರೂ ಸಂತೋಷವಾಗಿ ಜೀವಿಸಬಹುದು ಎಂದು ತೋರಿಸಲು ಹೊರಟಿದ್ದಾರೆ ಮಧ್ಯ ಪ್ರದೇಶದ ಈ ಕೋಟ್ಯಾಧಿಪತಿ ದಂಪತಿಗಳು. ಜೈನ ಸಮುದಾಯದ ದಂಪತಿಗಳು ತೆಗೆದುಕೊಂಡ ನಿರ್ಧಾರ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದೆ.

ಸುಮಿತ್ ರಾಥೋಡ್ (35) ಮತ್ತು ಅನಾಮಿಕ (34) ರವರು ಮಧ್ಯಪ್ರದೇಶದ ನೀಮಚ್ ನಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇವರ ಕುಟುಂಬ ಅಲ್ಲಿ ರಾಜಕೀಯವಾಗಿ ಮತ್ತು ಉದ್ಯಮದಲ್ಲಿಯೂ ಒಳ್ಳೆಯ ಹೆಸರು ಮಾಡಿರುವ ಕುಟುಂಬವಾಗಿದೆ. ಅವರಿಗೆ ಮೂರು ವರ್ಷದ ಮಗುವೂ ಇದೆ. ಆದರೆ ಅವರು ತಮ್ಮ ಮೂರು ವರ್ಷ ವಯಸ್ಸಿನ ಮಗು ಮತ್ತು 100 ಕೋಟಿ ಮೌಲ್ಯದ ಆಸ್ತಿಯನ್ನು ತೊರೆಯಲು ನಿರ್ಧರಿಸಿದ್ದಾರೆ. ಕಾರಣ.. ಕೆಲವೇ ದಿನಗಳಲ್ಲಿ ಅವರು ಸನ್ಯಾಸತ್ವ ಸ್ವೀಕರಿಸಲಿದ್ದಾರೆ. ಗುಜರಾತ್ ನಲ್ಲಿನ ಸೂರತ್ ನ ಸುಧಾಮಾರ್ಗಿ ಆಚಾರ್ಯ ರಾಮಲಾಲ್ ಮಹಾರಾಜ್ ಅವರ ಶಿಷ್ಯರಾಗಲು ಹೊರಟಿದ್ದೇವೆ ಎಂದು ದಂಪತಿಗಳು ಪ್ರಕಟಿಸಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

3 ವರ್ಷದ ಮಗಳ ಬಗ್ಗೆ ಯೋಚಿಸುವಂತೆ ಸಂಬಂಧಿಕರು, ಸ್ನೇಹಿತರು ಎಷ್ಟು ಬುದ್ದಿಹೇಳಿದರೂ ಕೇಳದೆ ಸೆಪ್ಟೆಂಬರ್ 23 ರಂದು ತಾವು ಆಧ್ಯಾತ್ಮಿಕ ಮಾರ್ಗದಲ್ಲಿ ತೆರಳುವ ಮೊದಲ ಹೆಜ್ಜೆ ಇಡುವುದಾಗಿ ಘೋಷಿಸಿದ್ದಾರೆ. ಪ್ರಮುಖ ಉದ್ಯಮಿ ಮತ್ತು ಸಿಮೆಂಟ್ ಕಾರ್ಖಾನೆಗಳ ಮಾಲೀಕರಾಗಿರುವ ಸುಮೀತ್ ಅವರ ತಂದೆ ರಾಜೇಂದ್ರ ಸಿಂಗ್ ರಾಥೋಡ್ ಅವರು ತಮ್ಮ ಮಗನ ನಿರ್ಧಾರಕ್ಕೆ ಬೆಂಬಲ ನೀಡಬಹುದು ಎನ್ನಲಾಗುತ್ತಿದೆ. ಆಗಸ್ಟ್ 22 ರಂದು ಸುಮೀತ್ ಅವರು ಆಧ್ಯಾತ್ಮಿಕತೆ ಕಡೆ ತೆರಳುವುದಾಗಿ ಪತ್ನಿ ಅನಾಮಿಕಾ ರವರಿಗೆ ಹೇಳಿದಾಗ, ಆಕೆ ತಾನೂ ಪತಿಯನ್ನು ಅನುಸರಿಸಲು ನಿರ್ಧರಿಸಿದರು.

ಪತಿ ಪತ್ನಿ ಇಬ್ಬರೂ ಸನ್ಯಾಸತ್ವ ಸ್ವೀಕರಿಸಿದರೆ ಮಗುವಿನ ಗತಿಯೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ ತನ್ನ ಮೊಮ್ಮಗಳನ್ನು ನಾನು ಸಾಕುತ್ತೇನೆ ಎಂದು ಅನಾಮಿಕ ಅವರ ತಂದೆ ಹಾಗೂ ನೀಮುಚ್ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಅಶೋಕ್ ಚಂದಾಲಿಯಾ ಹೇಳಿದ್ದಾರೆ. ದಂಪತಿಗಳ ನಿರ್ಧಾರವನ್ನು ಬದಲಿಸುವಂತೆ ನಾವು ಮನವೊಲಿಸಲಾರೆವು. ಧರ್ಮದ ಕರೆ ಬಂದಾಗ ಯಾರನ್ನೂ ತಡೆಯಲಾಗದು ಎಂದು ಚಂದಾಲಿಯಾ ಹೇಳಿದ್ದಾರೆ.

ರಾಜಸ್ಥಾನದ ಮೋದಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅನಾಮಿಕ ಬಿಇ ವ್ಯಾಸಂಗ ಮಾಡಿದ್ದು, ಮದುವೆಗೂ ಮುನ್ನ ಹಿಂದೂಸ್ಥಾನ ಜಿಂಕ್ ನಲ್ಲಿ ಕೆಲಸ ಮಾಡಿದ್ದರು. ಇನ್ನ ಸುಮಿತ್ ಲಂಡನ್ ನಲ್ಲಿ ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮಾ ಮಾಡಿದ್ದರು.

Get Latest updates on WhatsApp. Send ‘Add Me’ to 8550851559

Loading...