ನಕಲಿ ಸೇನಾ ನೇಮಕಾತಿ ಹಗರಣ ಬಯಲು, ನಾಲ್ವರ ಬಂಧನ

ಜೈಪುರ: ಸೇನೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅಕ್ರಮಕ್ಕೆ ಮುಂದಾದ ನಾಲ್ವರು ವ್ಯಕ್ತಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ರಾಜಸ್ಥಾನದ ಭಯೋತ್ಪಾದಕ ನಿಗ್ರಹ ಪಡೆ ನಕಲಿ ಸೇನಾ ನೇಮಕಾತಿ ಹಗರಣವನ್ನು ಬಯಲು ಮಾಡಿದೆ. ಬಂಧಿಸಿದ ನಾಲ್ವರಿಂದ ಸುಮಾರು 1 ಕೋಟಿ 80 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಸುಮಾರು ಹತ್ತು ವರ್ಷಗಳಿಂದ ಈ ನಾಲ್ವರೂ ಈ ಅಕ್ರಮ ನಡೆಸುತ್ತಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಜೈಪುರ ಪೊಲೀಸ್ ಠಾಣೆಯಲ್ಲಿ ಆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜಸ್ಥಾನ ಎಟಿಎಸ್ ಜೊತೆ ಮಿಲಿಟರಿ ಇಂಟಲಿಜೆನ್ಸ್ ಯೂನಿಟ್ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು. ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪ್ರತಿಯೊಬ್ಬರಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡಿರುವ ಆರೋಪ ಬಂಧಿತರ ಮೇಲಿದೆ. ಅಷ್ಟೇ ಅಲ್ಲದೆ ಉದ್ಯೋಗ ಬಯಸಿದ್ದ ವ್ಯಕ್ತಿಗಳ ಪ್ರಮಾಣ ಪತ್ರಗಳೂ ಬಂಧಿತರು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.