ರೆಡ್ಡಿ ಮಗಳ ಮದುವೆ: ರಾಜ್ಯ ನಾಯಕರಿಗೆ ಅಮಿತ್ ಶಾ ಹೇಳಿದ್ದೇನು?

ಬೆಂಗಳೂರು: ದೊಡ್ಡ ನೋಟು ರದ್ದು ಮಾಡಿ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿರುವ ಕೇಂದ್ರ ಸರ್ಕಾರ, ವಿವಾದಗಳಲ್ಲಿ ಸಿಲುಕದಂತೆ ವರ್ತಿಸಬೇಕು ಎಂದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಗಾಲಿ ಜನಾರ್ಧನರೆಡ್ಡಿ ಮಗಳು ಬ್ರಹ್ಮಿಣಿ ವಿವಾಹ ಮಹೋತ್ಸವಕ್ಕೆ ಹಾಜರಾಗಬಾರದು ಎಂದು ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸ್ಪಷ್ಟ ಆದೇಶ ನೀಡಿದೆ ಎನ್ನಲಾಗುತ್ತಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪನವರಿಗೆ ಸೋಮವಾರ ಕರೆ ಮಾಡಿ ಈ ವಿಷಯದಲ್ಲಿ ಸ್ಪಷ್ಟ ಆದೇಶ ನೀಡಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು.

ರೆಡ್ಡಿ ಮಗಳ ಮದುವೆಗೆ ಹಾಜರಾಗಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದ ಬಿಜೆಪಿ ರಾಜ್ಯ ನಾಯಕರು ಹೈಕಮಾಂಡ್ ಸೂಚನೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಕೋಟ್ಯಂತರ ರೂ. ಕಪ್ಪು ಹಣ ವೆಚ್ಚ ಮಾಡಿ ಮಗಳ ಮದುವೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಮದುವೆಗೆ ಬಿಜೆಪಿ ನಾಯಕರು ಹಾಜರಾದರೆ, ಅದು ಜನರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟರು ಎನ್ನಲಾಗಿದೆ.