ಯೋಧನ ವೈರಲ್ ವೀಡಿಯೋ, ಶಿಸ್ತು ಉಲ್ಲಂಘನೆ ಆತನಿಗೆ ಹೊಸದಲ್ಲ: ಬಿಎಸ್ಎಫ್

ನಿಯಂತ್ರಣ ರೇಖೆ ಬಳಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಬಿಎಸ್‌ಎಫ್ ಯೋಧ ತೇಜ್ ಬಹದೂರ್ ವೀಡಿಯೋವೊಂದನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

ಆದರೆ ಆತನ ಹಿರಿಯ ಅಧಿಕಾರಿಗಳು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಯೋಧ ತೇಜ್ ಬಹದೂರ್ ಆಗಾಗ ಇಂತಹ ಶಿಸ್ತು ಉಲ್ಲಂಘಿಸುವ ಕೃತ್ಯಗಳಿಗೆ ಮುಂದಾಗುತ್ತಿರುತ್ತಾರೆ ಎಂದು ಆರೋಪಿಸಿದ್ದಾರೆ.

ತೇಜ್ ಬಹದೂರ್ ಪೋಸ್ಟ್ ಮಾಡಿದ್ದ ವೀಡಿಯೋದಲ್ಲೇನಿತ್ತು?

ಯೋಧರಿಗೆ ನೀಡಲಾಗುತ್ತಿದ್ದ ಅಹಾರ ಪದಾರ್ಥಗಳು ಪೌಷ್ಠಿಕಾಂಶವಿಲ್ಲದ ಕಳಪೆ ಗುಣಮಟ್ಟದ್ದಾಗಿದೆ, ಅರೆಬರೆ ಸುಟ್ಟ ಚಪಾತಿ ಮತ್ತು ತಿನ್ನಲು ಅನರ್ಹವಾದ ದಾಲ್ ಊಟಕ್ಕೆ ನೀಡಲಾಗುತ್ತಿದೆ. ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿ ಯೋಧರು ಮಲಗಬೇಕಾಗುತ್ತದೆ ಎಂದು ವೀಡಿಯೋದಲ್ಲಿ ಯೋಧ ಹೇಳಿದ್ದಾನೆ.

ಈ ವೀಡಿಯೋವನ್ನು ಅಸಂಖ್ಯಾತ ಜನರು ಶೇರ್ ಮಾಡಿದ್ದು, ಯೋಧರ ಈ ಕರುಣಾಜನಕ ಸ್ಥಿತಿಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ

ಈ ಸುದ್ದಿ ಹರಿದಾಡಲು ಆರಂಭಿಸಿದ ಕೆಲ ಗಂಟೆಗಳ ನಂತರ ಡಿಐಜಿ ದರ್ಜೆಯ ಬಿಎಸ್ಎಫ್ ಅಧಿಕಾರಿಯೊಬ್ಬರು ವೀಡಿಯೋದಲ್ಲಿ ತೋರಿಸಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪ ಮಾಡಿರುವ ಯೋಧನ ಮೇಲೆ ಹಿಂದಿನಿಂದಲೂ ಅನುಮತಿ ಇಲ್ಲದೆ ಗೈರು ಹಾಜರಾಗುವುದು, ಸದಾ ಮಧ್ಯದ ನಿಶೆಯಲ್ಲಿರುವುದು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುವುದು ಮುಂತಾದ ಆರೋಪಗಳಿವೆ. ಎಂದು ಬಿಎಸ್ಎಫ್ ಹೇಳಿಕೆ ಬಿಡುಗಡೆ ಮಾಡಿದೆ.

ಇನ್ನು ಈ ವೀಡಿಯೋ ಕೇಂದ್ರ ಗೃಹ ಸಚಿವ ರಾಜನಾಥ್ ಅವರ ತನಕ ತಲುಪಿದ್ದು, ಈ ವಿಷಯದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ ಮತ್ತು ಗೃಹ ಕಾರ್ಯದರ್ಶಿಯಿಂದ ವರದಿ ಕೇಳಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.