ತಮಿಳುನಾಡಿನಲ್ಲಿ ಐಟಿ ಶಾಕ್, ಏಕಕಾಲದಲ್ಲಿ 187 ಕಡೆ ದಾಳಿ

ಚೆನ್ನೈ: ದಿನಕರನ್ ಸೇರಿದಂತೆ ಅಕ್ರಮ ಅಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ಮತ್ತು ಆಕೆಯ ಆಪ್ತರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತೆರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಮಿಳುನಾಡಿನಾದ್ಯಂತ ಏಕಕಾಲದಲ್ಲಿ 187 ಕಡೆ ದಾಳಿ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ಪುದುಚ್ಚೇರಿ, ಬೆಂಗಳೂರುಗಳಲ್ಲಿರುವ ಇವರ ಸಂಬಂಧಿಕರ ನಿವಾಸಗಳಲ್ಲಿಯೂ ದಾಳಿ ನಡೆದಿವೆ. ಅಣ್ಣಾ ಡಿಎಂಕೆ(ಶಶಿಕಲಾ ಬಣ) ನೇತೃತ್ವದಲ್ಲಿ ನಡೆಯುತ್ತಿರುವ ಜಯಾ ಟಿವಿ, ಎಂಜಿಆರ್ ಪತ್ರಿಕೆ ಕಛೇರಿಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಆಪರೇಷನ್ ಕ್ಲೀನ್ ಮನಿ ಭಾಗವಾಗಿ ಈ ದಾಳಿಗಳು ನಡೆಯುತ್ತಿವೆ ಎಂದು ಐಟಿ ಮೂಲಗಳು ಹೇಳಿವೆ. ಜಯಲಲಿತಾ ನಿಧನದ ನಂತರ ಶಶಿಕಲಾ ಬಣದ ನೇತೃತ್ವದಲ್ಲಿ ಜಯಾ ಟಿವಿ ನಡೆಯುತ್ತಿದೆ. ಈ ದಾಳಿಗಳಲ್ಲಿ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಮನ್ನಾರ್ ಗುಡಿಯಲ್ಲಿ ಶಶಿಕಲಾ ಸಹೋದರ ದಿವಾಕರನ್ ಮನೆಯಲ್ಲಿ ಶೋಧ ನಡೆಸಿದ ನಂತರ, ಆತನನ್ನು ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ.

ಜಯಲಲಿತಾ ಆಪ್ತೆ ಶಶಿಕಲಾ ಮೇಲಿರುವ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂತಿಮ ವಿಚಾರಣೆ ಬುಧವಾರ ಮುಗಿದಿದೆ. ತೀರ್ಪು ಮಾತ್ರ ಹೊರಬೀಳಬೇಕಿದೆ. ಈ ಹಿನ್ನೆಲೆಯಲ್ಲಿ ಶಶಿಕಲಾ, ದಿನಕರನ್ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಏಕಕಾಲದಲ್ಲಿ ತಮಿಳುನಾಡು, ಪುದುಚ್ಚೇರಿ, ಬೆಂಗಳೂರುಗಳಲ್ಲಿ ಐಟಿ ದಾಳಿ ನಡೆದಿರುವು ತಮಿಳುನಾಡಿನಲ್ಲಿ ಸಂಚಲನ ಉಂಟುಮಾಡಿದೆ. ಶಶಿಕಲಾ ಪತಿ ನಟರಾಜನ್, ಸಹೋದರ ದಿವಾಕರನ್, ಅಕ್ಕ ವನಿತಾಮಣಿ ಪುತ್ರರಾದ ದಿನಕರನ್, ಭಾಸ್ಕರನ್, ಅಣ್ಣ ಸುದರವನನ್ ಪುತ್ರ ಡಾಕ್ಟರ್ ವೆಂಕಟೇಶನ್, ಶಶಿಕಲಾರೊಂದಿಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಇಳವರಸಿ ಅವರ ಪುತ್ರ ವಿವೇಕ್ ಜಯರಾಮನ್, ಪುತ್ರಿ ಕೃಷ್ಣಪ್ರಿಯ, ಸಂಬಂಧಿಕರಾದ ಕಳಿಯ ಪೆರುಮಾಲ್, ದಿವಾಕರನ್ ಅಳಿಯ ಡಾ.ವಿಕ್ರಮ್, ಆಪ್ತರಾದ ಅಗ್ರಿ ರಾಜೇಂದ್ರನ್, ಮನ್ನಾರ್ ಗುಡಿ ಸುಜಯ್, ಸಹಾಯಕ ವಿನಾಯಕಂ, ವಕೀಲ ಸಂಥಿಲ್, ಆಡಿಟರ್ ಚಂದ್ರಶೇಖರನ್, ಉದ್ಯಮಿ ಆರ್ಮುಗಸ್ವಾಮಿ ಸೇರಿದಂತೆ ಶಶಿಕಲಾ, ದಿನಕರನ್ ಬೆಂಬಲಿಗ ಅಣ್ಣಾಡಿಎಂಕೆ ನಾಯಕರು, ಅವರ ಸಂಬಂಧಿಕರ ಬೇನಾಮಿ ಮನೆಗಳು, ಕಛೇರಿಗಳ ಮೇಲೆ ಏಕಕಾಲದಲ್ಲಿ ದಾಳಿಗಳು ನಡೆದಿವೆ.

ಬೆಳಗ್ಗೆ ಆರು ಗಂಟೆಯಿಂದ 1,800 ಜನ ಐಟಿ ಅಧಿಕಾರಿಗಳು ದಾಳಿಗಳಲ್ಲಿ ಭಾಗವಹಿಸಿದ್ದರು. ಬೇರೆ ಬೇರೆ ತಂಡಗಳಲ್ಲಿ ತಂಜಾವೂರು, ತಿರುವಾರೂರ್, ಮನ್ನಾರ್ ಗುಡಿ, ಕೊಯಂಬತ್ತೂರು, ನಾಮಕ್ಕಲ್, ತಿರುಚ್ಚಿ, ಈರೋಡ್, ಪುದುಕೋಟ್ಟೈ ಮುಂತಾದ ಪ್ರದೇಶಗಳಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಶೋಧ ಕಾರ್ಯ ನಡೆಸಿದರು. ಚೆನ್ನೈನಲ್ಲಿಯೇ 20 ಕಡೆ ಶೋಧ ನಡೆಸಿದರು. ಗುರುವಾರ ರಾತ್ರಿಯವರೆಗೂ ಈ ಶೋಧ ಕಾರ್ಯ ನಡೆಯಿತು. ಬೆಂಗಳೂರಿನ ಮುರುಗೇಶಪಾಳ್ಯದಲ್ಲಿರುವ ಶಶಿಕಲಾ ಆಪ್ತ, ಅಣ್ಣಾಡಿಎಂಕೆ ಕರ್ನಾಟಕ ಉಸ್ತುವಾರಿ ಪುಹಳೇಂದಿ ಮನೆಯ ಮೇಲೂ ದಾಳಿ ನಡೆದಿದೆ.

ಐಟಿ ದಾಳಿಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ದಿನಕರನ್, ತಮ್ಮನ್ನು ತುಳಿಯಲೆಂದೇ ಕೇಂದ್ರ ಹೂಡಿರುವ ತಂತ್ರವನ್ನು ಐಟಿ ಇಲಾಖೆ ಜಾರಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಶಿಕಲಾ ಮತ್ತು ತಮ್ಮನ್ನು ರಾಜಕಾರಣದಿಂದ ದೂರ ಮಾಡುವ ಉದ್ದೇಶದಿಂದಲೇ ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Get Latest updates on WhatsApp. Send ‘Add Me’ to 8550851559