ಜೆಡಿಯು ನಿಂದ 21 ಮುಖಂಡರ ಅಮಾನತು – News Mirchi

ಜೆಡಿಯು ನಿಂದ 21 ಮುಖಂಡರ ಅಮಾನತು

ಬಿಹಾರದಲ್ಲಿ ಆಡಳಿತ ಪಕ್ಷ ಜೆಡಿಯು 21 ಜನ ನಾಯಕರನ್ನು ಪಕ್ಷದಿಂದ ಹೊರಹಾಕಿದೆ. ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆರೋಪದ ಮೇಲೆ 21 ಜನ ನಾಯಕರನ್ನು ಜೆಡಿಯು ನಿಂದ ಅಮಾನತುಗೊಳಿಸಲಾಗಿದೆ. ಇತ್ತೀಚೆಗಷ್ಟೇ ಎನ್.ಡಿ.ಎ ಜೊತೆ ಕೈಜೋಡಿಸಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರ ರಚಿಸಿತ್ತು. ಈ ಬೆಳವಣಿಗೆ ಇಷ್ಟವಿಲ್ಲದ ಶರದ್ ಯಾದವ್, ನಿತೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿರೋಧ ಪಕ್ಷಗಳೊಂದಿಗೆ ಸೇರಿ ನಿತೀಶ್ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ.

ಶರದ್ ಯಾದವ್ ಅವರೊಂದಿಗೆ 21 ಜೆಡಿಯು ಮುಖಂಡರು ಗುರುತಿಸಿಕೊಂಡಿದ್ದು ನಿತೀಶ್ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಇವರನ್ನು ಪಕ್ಷವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಸೋಮವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಮಾನತಾದ ಮುಖಂಡರೆಲ್ಲಾ ಇತ್ತೀಚೆಗೆ ಶರದ್ ಯಾದವ್ ರಾಜ್ಯಾದ್ಯಂತ ಕೈಗೊಂಡಿರುವ ಸಂವಾದ್ ಯಾತ್ರೆಯಲ್ಲಿ ಸುತ್ತಾಡಿದವರಾಗಿರುವುದು ಗಮನಾರ್ಹ.

ಮಾಜಿ ಸಚಿವ ರಮೈ ರಾಮ್, ಮಾಜಿ ಸಂಸದ ಅರ್ಜುನ್ ರಾಯ್ ರಂತಹ ಹಿರಿಯ ನಾಯಕರು ಕೂಡಾ ಅಮಾನತಾಗಿರುವವರಲ್ಲಿ ಪ್ರಮುಖರು. ಮುಜಫರ್ ಪುರದಲ್ಲಿ ಶರದ್ ಯಾದವ್ ಕೈಗೊಂಡಿರುವ ಸಮಾವೇಶದಲ್ಲಿ ಪಾಲ್ಗೊಂಡ ಈ ಇಬ್ಬರು ನಾಯಕರು, ಶರದ್ ಯಾದವ್ ಅವರಿಗೆ ಬಹಿರಂಗವಾಗಿಯೇ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಮಾಜಿ ಶಾಸಕ ರಾಜ್ ಕಿಶೋರ್ ಸಿನ್ಹಾ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ವರ್, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಪಕ್ಷದ ಉಸ್ತುವಾರಿಗಳಾಗಿ ಕೆಲಸ ಮಾಡುತ್ತಿದ್ದವರೂ ಅಮಾನತಾದವರ ಪಟ್ಟಿಯಲ್ಲಿದ್ದಾರೆ.

Loading...