ರಿಲಯನ್ಸ್ ಜಿಯೋಫೋನ್ ಬುಕಿಂಗ್ ಸ್ಥಗಿತ

View Later

ರಿಲಯನ್ಸ್ “ಜಿಯೋ ಫೋನ್” ಗೆ ಬುಕಿಂಗ್ಸ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವೆಬ್ಸೈಟ್ ಕ್ರ್ಯಾಷ್ ಆಗುವಷ್ಟು ಭಾರೀ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗಿದ್ದು, ಒಂದೇ ದಿನದಲ್ಲಿ 30 ಲಕ್ಷದಷ್ಟು ಹ್ಯಾಂಡ್ಸೆಂಟ್ ಬುಕ್ ಆಗಿವೆ. ಒಟ್ಟು ಮೂರು ದಿನದಲ್ಲಿ 1 ಕೋಟಿ ಫೋನ್ ಮುಂಗಡ ಬುಕಿಂಗ್ ಆಗಿವೆ ಎನ್ನಲಾಗುತ್ತಿದೆ. ಆದರೆ ಸದ್ಯ ಜಿಯೋ ಈ ಫೋನ್ ಮುಂಗಡ ಬುಕಿಂಗ್ ಅನ್ನು ನಿಲ್ಲಿಸುತ್ತಿದೆ ಎಂದು ಪ್ರಕಟಿಸಿದೆ. ಮುಂಗಡ ಬುಕಿಂಗ್ ಬಯಸುವವರು ಈಗ ಕೇವಲ ಖರೀದಿಸಲು ಆಸಕ್ತರಿರುವುದಾಗಿ ನೋಂದಣಿ ಮಾಡಿಕೊಳ್ಳಬಹುದಷ್ಟೇ. ಪುನಃ ಮುಂಗಡ ಬುಕಿಂಗ್ ಯಾವಾಗ ಆರಂಭಿಸುತ್ತಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಜಿಯೋ ವೆಬ್ಸೈಟ್ ನಲ್ಲಿ ಹೇಳಿದೆ.

ಥ್ಯಾಂಕ್ಯೂ ಇಂಡಿಯಾ, ಲಕ್ಷಾಂತರ ಜನ ಜಿಯೋ ಫೋನ್ ಗೆ ಬುಕ್ ಮಾಡಿದ್ದೀರಿ ಎಂದು ಜಿಯೋ.ಕಾಂ ಮುಖಪುಟದಲ್ಲಿ ಕಂಪನಿಯ ಬ್ಯಾನರ್ ಮೂಲಕ ಈ ವಿಷಯವನ್ನು ಹೇಳಿದೆ. ಇದ್ದಕ್ಕಿದ್ದಂತೆ ಜಿಯೋಫೋನ್ ಪ್ರಿ ಬುಕಿಂಗ್ ನಿಲ್ಲಿಸಿದ್ದರಿಂದ ಬುಕ್ ಮಾಡಲು ಕಾತರರಾಗಿದ್ದವರಿಗೆ ನಿರಾಸೆಯಾಗಿದೆ. ಜಿಯೋ 4ಜಿ ಫೀಚರ್ ಫೋನ್ ಬುಕಿಂಗ್ಸ್ ಇದೇ ತಿಂಗಳ 24 ರಂದು ಸಂಜೆ 5:30 ಕ್ಕೆ ಆರಂಭವಾಗಿ 26ರ ಬೆಳಗ್ಗೆಯವರೆಗೂ ಮುಂದುವರೆದಿತ್ತು. ಆಂದರೆ ಕೇವಲ 36 ಗಂಟೆಗಳಲ್ಲಿ ಬುಕಿಂಗ್ ನಡೆದಿದ್ದು, ಅಷ್ಟರಲ್ಲಿಯೇ ಬುಕಿಂಗ್ ಆದ ಫೋನ್ ಗಳ ಸಂಖ್ಯೆ 1 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಈಗ ಬುಕ್ ಮಾಡಿಕೊಂಡವರಿಗೆ ಸೆಪ್ಟೆಂಬರ್ ನಲ್ಲಿ ಜಿಯೋಫೋನ್ ನೀಡಲಾಗುತ್ತದೆ. ಸೆಪ್ಟೆಂಬರ್ ಯಾವಾಗ, ಯಾವ ಮಳಿಗೆಯಲ್ಲಿ ಈ ಫೋನ್ ಪಡೆಯಬಹುದು ಎಂಬುದನ್ನು ಗ್ರಾಹಕರ ಮೊಬೈಲಿಗೆ ಸಂದೇಶ ಬರುತ್ತದೆ.