ಬಿಜೆಪಿ ಜೊತೆ ದೋಸ್ತಿ ಕುರಿತು ಮಾತು ಬದಲಿಸಿದ ಕಮಲ್ – News Mirchi

ಬಿಜೆಪಿ ಜೊತೆ ದೋಸ್ತಿ ಕುರಿತು ಮಾತು ಬದಲಿಸಿದ ಕಮಲ್

ಸ್ವಚ್ಛ ಭಾರತ ಮತ್ತು ನೋಟು ರದ್ದು ಕ್ರಮಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದ ಮೂರು ದಿನಗಳ ನಂತರ, ನಟ ಕಮಲ್ ಹಾಸನ್ ಇದೀಗ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳೊಂದಿಗೆ ಕೈಜೋಡಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ತನ್ನ ಬಣ್ಣ ಕೇಸರಿಯಲ್ಲ ಎಂದು ಕಮಲ್ ಹಾಸನ್ ಹೇಳಿದ್ದು, ರಜನಿಕಾಂತ್ ಅವರು ಬಿಜೆಪಿಗೆ ಅನುಕೂಲಕರವಾಗಿದ್ದಾರೆ, ಆದರೆ ತಾನು ಮಾತ್ರ ವಿಚಾರವಾದಿ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

ರಾಜಕೀಯದಲ್ಲಿ ಯಾರೂ ಅಸ್ಪೃಶ್ಯರಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಗೆ ಕಮಲ್ ಹಾಸನ್ ಸಂದರ್ಶನ ನೀಡಿದ್ದು, ಜನರಿಗೆ ಒಳ್ಳೆಯದಾಗುತ್ತದೆ ಎಂದಾದರೆ ಬಿಜೆಪಿಯೊಂದಿಗೆ ಕೈಜೋಡಿಸಲು ಸಿದ್ಧ, ಆದರೆ ಬಿಜೆಪಿಯವರಿಗೆ ನನ್ನ ಸಿದ್ಧಾಂತಗಳು ಒಪ್ಪಿಗೆಯಾಗುತ್ತವೆ ಎಂದು ಹೇಳಲಾರೆ ಎಂದು ಹೇಳಿದ್ದಾರೆ. ಗೋಮಾಂಸ ಸೇವನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತೇನೆ. ಈ ಹಿಂದೆ ನಾನೂ ಗೋಮಾಂಸ ಸೇವಿಸುತ್ತಿದ್ದೆ, ಆದರೆ ಈಗ ಬಿಟ್ಟಿದ್ದೇನೆ. ಅದರರ್ಥ ಇತರರೂ ಬಿಡಬೇಕೆಂದೇನೂ ಇಲ್ಲ ಎಂದು ಹೇಳಿದರು.

ಎಡಪಕ್ಷಗಳೊಂದಿಗೆ ಕೈಜೋಡಿಸುತ್ತೀರಾ ಎಂದು ಕೇಳಿದಾಗ, ಅದರ ಅಗತ್ಯವಿಲ್ಲ, ನನಗೆ ಜನರು ಮುಖ್ಯವಾಗಿರುವುದರಿಂದ ಅವರಿಗಾಗಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು.

ಇದಕ್ಕೂ ಮುನ್ನ ಇಂಟಿಯಾ ಟುಡೇ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಮಲ್, ಪ್ರಧಾನಿ ಮೋದಿಯವರ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಇತರರು ಭರವಸೆಗಳನ್ನು ನೀಡುತ್ತಾರೆ, ಆದರೆ ಮೋದಿಯವರು ಪ್ರಯತ್ನಿಸುತ್ತಿದ್ದಾರೆ. ಸ್ವಚ್ಛ ಭಾರತ ಆಭಿಯಾನ ಒಳ್ಳೆಯ ನಡೆ, ನೋಟು ರದ್ದು ಕ್ರಮ ಒಳ್ಳೆಯದು. ಆದರೆ ನೋಟು ರದ್ದು ಕ್ರಮ ಕುರಿತು ಟೀಕೆಗಳಿವೆ, ಈ ಕುರಿತು ನಾವು ಈಗಲೇ ತೀರ್ಮಾನಕ್ಕೆ ಬರಬಾರದು ಎಂದು ಹೇಳಿದ್ದರು.

Get Latest updates on WhatsApp. Send ‘Add Me’ to 8550851559

Loading...