ನೆಲಸಮವಾಗಲಿದೆ ಏಷ್ಯಾದ ಅತಿ ದೊಡ್ಡ ಚಿತ್ರಮಂದಿರ “ಕಪಾಲಿ”

ಬೆಂಗಳೂರು: ದಶಕಗಳಿಂದ ಏಷ್ಯಾದಲ್ಲೇ ಅತಿ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ ಪಡೆದಿರುವ ನಗರದ ಕಪಾಲಿ ಚಿತ್ರಮಂದಿರ ನೆಲಸಮವಾಗಲು ಸಿದ್ಧವಾಗುತ್ತಿದೆ. 1500 ಪ್ರೇಕ್ಷಕರು ಕೂರಬಹುದಾದ ಸಾಮರ್ಥ್ಯ ಹೊಂದಿರುವ ಕಪಾಲಿ ಚಿತ್ರಮಂದಿರವನ್ನು 1968 ಮೊರಾರ್ಜಿ ದೇಸಾಯಿಯವರು ಉದ್ಘಾಟಿಸಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಚಿತ್ರಗಳಿಗೆ ಇದು ಅದೃಷ್ಟದ ಚಿತ್ರಮಂದಿರ ಎಂದು ಹೆಸರಾಗಿತ್ತು. “ಮಾತೆಯೇ ಮಹಾ ಮಂದಿರ” ಚಲನಚಿತ್ರ ಇಲ್ಲಿ ತೆರೆ ಕಂಡ ಮೊದಲ ಕನ್ನಡ ಚಿತ್ರ. ಡಾ. ರಾಜ್ ಕುಮಾರ್ ರವರ “ಮಣ್ಣಿನ ಮಗ” ಮೊದಲ ಶತ ದಿನೋತ್ಸವ ಆಚರಿಸಿದ ಚಿತ್ರ.

ನಗರದ ಹೃದಯಭಾಗದಲ್ಲಿದ್ದರೂ, ಈಗ ಪ್ರೇಕ್ಷಕರ ಕೊರತೆ ಮತ್ತು ಸಿಂಗಲ್ ಪರದೆ ಚಿತ್ರಮಂದಿರಗಳಿಗೆ ಮಹತ್ವ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರದ ಜಾಗದಲ್ಲಿ ಶಾಪಿಂಗ್ ಮಾಲ್ ನಿರ್ಮಾಣ ಮಾಡಲು ಅದರ ಮಾಲೀಕರು ಮುಂದಾಗುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಪ್ರಸಿದ್ಧ ಸಂಗಂ, ಮೆಜೆಸ್ಟಿಕ್, ತ್ರಿಭುವನ್, ಸಾಗರ್, ಕಲ್ಪನ, ಕೈಲಾಶ್ ಚಿತ್ರಮಂದಿರಗಳು ಮರೆಯಾಗಿವೆ.