ರೈತರ ಬೇಡಿಕೆಗೆ ಕೊನೆಗೂ ಮಣಿದ ಸಿದ್ದರಾಮಯ್ಯ, 50 ಸಾವಿರವರೆಗಿನ ಸಾಲ ಮನ್ನಾ |News Mirchi

ರೈತರ ಬೇಡಿಕೆಗೆ ಕೊನೆಗೂ ಮಣಿದ ಸಿದ್ದರಾಮಯ್ಯ, 50 ಸಾವಿರವರೆಗಿನ ಸಾಲ ಮನ್ನಾ

ರಾಜ್ಯದ ರೈತರ ಬಹು ದಿನಗಳ ಸಾಲ ಮನ್ನಾ ಬೇಡಿಕೆಗೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ಜೂನ್ 20 ರವರೆಗೆ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ ರೈತರ ಸಾಲದಲ್ಲಿ ರೂ. 50 ಸಾವಿರಗಳನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 8,167 ಕೋಟಿ ರೂಪಾಯಿ ಹೊರೆ ಬೀಳಲಿದೆ.

ರಾಜ್ಯ ಸರ್ಕಾರದ ಸಾಲ ಮನ್ನಾ ಕ್ರಮದಿಂದ ರಾಜ್ಯದ 22,27,506 ರೈತರಿಗೆ ಅನುಕೂಲವಾಗಲಿದೆ. ಮೂಲಗಳ ಪ್ರಕಾರ ರೈತರ ಸಾಲ ಸುಮಾರು 55 ಸಾವಿರ ಕೋಟಿಯಷ್ಟಿದ್ದು, ಈಗ ರಾಜ್ಯ ಸರ್ಕಾರದ ಘೋಷಣೆಯಂತೆ ರೂ. 8167 ಕೋಟಿ ಯಷ್ಟು ಸಾಲ ಮಾತ್ರ ಮನ್ನಾ ಆಗಲಿದೆ. ಸಾಲ ಮನ್ನಾ ಮಾಡುವ ಘೋಷಣೆಯಾಗುತ್ತಿದ್ದಂತೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿದೆ, ಹಾಗೆಯೇ ಕೇಂದ್ರ ಸರ್ಕಾರ ಕೂಡಾ ರೈತರು ವಾಣಿಜ್ಯ ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳ ಸರ್ಕಾರಗಳು  ರೈತರ ಸಾಲ ಮನ್ನಾ ಮಾಡಿದ ನಂತರ ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ಇತ್ತೀಚೆಗಷ್ಟೇ ಸಾಲ ಮನ್ನಾ ಮಾಡುತ್ತಿರುವುದಾಗಿ ಘೋಷಿಸಿತ್ತು. ಅಷ್ಟೇ ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಲ ಮನ್ನಾ ಜತೆಗೆ ಘೋಷಿಸಿದ್ದ ನಷ್ಟ ಪರಿಹಾರವನ್ನು 3 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಪಂಜಾಬ್ ಸರ್ಕಾರ ಏರಿಸಿದೆ. ಪಂಜಾಬ್ ಸಾಲ ಮನ್ನಾ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ರೂ.50 ಸಾವಿರವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದೆ.

Loading...
loading...
error: Content is protected !!