ಹೈಕಮಾಂಡಿಗೆ ಕಪ್ಪಕಾಣಿಕೆ, ಮೌನಕ್ಕೆ ಶರಣಾದ ಮುಖ್ಯಮಂತ್ರಿ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕಪ್ಪ ಕಾಣಿಕೆ ನೀಡಿರುವಂತೆ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ದಾಖಲಾಗಿರುವ ಮಾಹಿತಿ ಬಹಿರಂಗಗೊಂಡಿದೆ. ಕಾಂಗ್ರೆಸ್ ನ ಹಲವು ನಾಯಕರ ಹೆಸರುಗಳನ್ನು ಸೂಚಿಸುವಂತೆ ಇನಿಷಿಯಲ್ ಗಳಲ್ಲಿ ಬರೆಯಲಾಗಿದ್ದು, ಯಾರಿಗೆ ಯಾವಾಗ ಎಷ್ಟು ಹಣ ನೀಡಲಾಗಿದೆ ಎಂಬ ವಿವರಗಳಿವೆ. ಈ ವಿವರಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದೆ. ವಿವಾದಕ್ಕೆ ಕಾರಣವಾಗಿರುವ ಸರ್ಕಾರದ ಸ್ಟೀಲ್ ಬ್ರಿಡ್ಜ್ ಯೋಜನೆಯಿಂದ ಕಾಂಗ್ರೆಸ್ ಹೈಕಮಾಂಡಿಗೆ ರೂ. 65 ಕೋಟಿ ಹಣ ಸಂದಾಯ ಮಾಡಿರುವುದು ದಾಖಲಾಗಿದೆ ಎನ್ನಲಾಗುತ್ತಿದೆ. ಡೈರಿಯಲ್ಲಿ ಕೆ.ಜೆ.ಜೆ, ಹೆಚ್.ಎಂ., ಡಿ.ಕೆ.ಎಸ್, ಆರ್.ವಿ.ಡಿ, ಎಸ್.ಬಿ, ರಘು ಮುಂತಾದ ಇನಿಷಯಲ್ ಗಳು ಬರೆಯಲಾಗಿದ್ದು ಅವರಿಂದ ರೂ. 450 ಕೋಟಿ ಪಡೆದು ಹೈಕಮಾಂಡಿಗೆ ನೀಡಿರುವ ಮಾಹಿತಿಯಿದೆ.

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆಯ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳಿಗೆ ಡೈರಿಯೊಂದು ಸಿಕ್ಕಿದ್ದು, ಇದರಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರಿಂದ ಹೈಕಮಾಂಡಿಗೆ ನೂರಾರು ಕೋಟಿ ಕಪ್ಪ ಕಾಣಿಕೆ ಸಂದಾಯ ಮಾಡಿರುವ ಮಾಹಿತಿ ಲಭ್ಯವಾಗಿತ್ತು.

ಡೈರಿಯಲ್ಲಿ ಹೈಕಮಾಂಡಿಗೆ ಕಪ್ಪ ಕಾಣಿಗೆ ನೀಡಿರುವ ವಿವರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಸಿ.ಎಂ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ನಿವಾಸಕ್ಕೆ ಭೇಟಿಗಾಗಿ ಆಗಮಿಸಿದ ಶಾಸಕರು ಹಾಗೂ ಸಂಸದರಿಗೂ ಭೇಟಿಗೆ ಅವಕಾಶ ನೀಡಿಲ್ಲ ಎಂದು ಹೇಳಲಾಗಿದೆ.