ರವಿ ಬೆಳಗೆರೆ, ಅನಿಲ್ ರಾಜ್ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆ – News Mirchi

ರವಿ ಬೆಳಗೆರೆ, ಅನಿಲ್ ರಾಜ್ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆ

ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿಯು ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ಯಲಹಂಕಾ ವಾಯ್ಸ್ ಪತ್ರಿಕೆ ಸಂಪಾದಕ ಅನಿಲ್ ರಾಜ್ ಅವರಿಗೆ ನೀಡಿದ್ದ ಒಂದು ವರ್ಷದ ಜೈಲು ಶಿಕ್ಷೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿ ನೀಡಿದ್ದ ಜೈಲು ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಪತ್ರಕರ್ತರು ಮಾಡಿದ್ದ ಮನವಿಯನ್ನು ವಿಧಾನಸಭೆ ತಿರಸ್ಕರಿಸಿದ ನಂತರ ಕರ್ನಾಟಕ ಸರ್ಕಾರವು ಈ ಇಬ್ಬರೂ ಪತ್ರಕರ್ತರನ್ನು ಬಂಧಿಸುವಂತೆ ಆದೇಶಿಸಿತ್ತು.

ಸ್ಪೀಕರ್ ಕೆ.ಬಿ.ಕೋಳಿವಾಡ, ಕಾಂಗ್ರೆಸ್ ಶಾಸಕ ಬಿಎಂ ನಾಗರಾಜ್ ಮತ್ತು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ವಿರುದ್ಧ ಮಾನಹಾನಿ ಲೇಖನಗಳನ್ನು ಪ್ರಕಟಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರಿಗೆ ಜೂನ್ 21 ರಂದು ಸ್ಪೀಕರ್ ಕೋಳಿವಾಡ ಅವರು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪತ್ರಕರ್ತರು ಮನವಿ ಮಾಡಿದ್ದರು. ನವೆಂಬರ್ 21 ರಂದು ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಧ್ವನಿ ಮತದ ಮೂಲಕ ಶಿಕ್ಷೆಯನ್ನು ಮರುಪರಿಶೀಲಿಸುವ ಮನವಿಯನ್ನು ತಿರಸ್ಕರಿಸಿತ್ತು.

ಬುಧವಾರ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಎ.ಎಸ್.ಬೋಪಣ್ಣ, ಮುಂದಿನ ಆದೇಶದವರೆಗೂ ಅವರಿಗೆ ಕರ್ನಾಟಕ ವಿಧಾನಸಭೆ ಹಕ್ಕು ಬಾಧ್ಯತಾ ಸಮಿತಿ ನೀಡಿದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...