ಅಂದು ಭದ್ರತಾ ಪಡೆಗಳ ಮೇಲೆ ಕಲ್ಲೆಸೆದಿದ್ದವಳು ಫುಟ್ಬಾಲ್ ತಂಡದ ನಾಯಕಿ!

ಈ ವರ್ಷದ ಆರಂಭದಲ್ಲಿ ಭದ್ರತಾ ಪಡೆಗಳತ್ತ ಯುವತಿಯೊಬ್ಬಳು ಕಲ್ಲು ತೂರುತ್ತಿರುವ ಫೋಟೋ ಒಂದು ವೈರಲ್ ಆಗಿತ್ತು. ಆಕೆ ಬೇರೆ ಯಾರೂ ಅಲ್ಲ, ಜಮ್ಮು ಕಾಶ್ಮೀರದ ಫುಟ್ಬಾಲ್ ತಂಡದ ನಾಯಕಿ ಅಫ್ಸಾನ್ ಆಶಿಕ್ ಎಂಬುದು ಬೆಳಕಿಗೆ ಬಂದಿದೆ. ಆಕೆ ಮಂಗಳವಾರ ತನ್ನ ತಂಡದ ಆಟಗಾರ್ತಿಯರೊಂದಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು.

ಕಾಶ್ಮೀರ ಕಣಿವೆಯಲ್ಲಿ ಕೆಲ ಯುವಕರೇಕೆ ಉಗ್ರರಾಗಲು ಹೊರಟಿದ್ದಾರೆ ಎಂದು ಕೇಳಿದ್ದು, ನಾವು ಕ್ರೀಡಾಕಾರರಾಗಿದ್ದು, ಕ್ರೀಡೆ ಕುರಿತು ಮಾತನಾಡಲು ಬಯಸುತ್ತೇವೆ ಎಂದು ಪ್ರತಿಕ್ರಿಯಿಸಿರುವುದಾಗಿ ಆಕೆ ಹೇಳಿದ್ದಾಳೆ. ಕ್ರೀಡೆಯಲ್ಲಿ ಜೀವನೋಪಾಯ ಕಂಡುಕೊಳ್ಳಲು ಆಸಕ್ತಿ ಹೊಂದಿರುವ ಕಾಶ್ಮೀರ ಕಣಿವೆಯ ಯುವಕರಿಗೆ ಗೃಹಸಚಿವರ ಭೇಟಿಯು ಸಕಾರಾತ್ಮಕ ಬೆಳವಣೆಗೆ ಎಂದು ಆಕೆ ಹೇಳಿದ್ದಾರೆ.

25 ಸದಸ್ಯರ ನಿಯೋಗಕ್ಕೆ ಅಫ್ಷಾನ್ ಆಶಿಕ್ ನೇತೃತ್ವ ವಹಿಸಿದ್ದರು. ಈ ನಿಯೋಗದಲ್ಲಿ 22 ಮಹಿಳಾ ಸದಸ್ಯರಿದ್ದು, 11 ಜನ ಜಮ್ಮು ಕಾಶ್ಮೀರ, ಹರಿಯಾಣದಿಂದ 6, ಒಡಿಶಾದಿಂದ 3 ಮತ್ತು ಬಿಹಾರ ಮತ್ತು ಜಾರ್ಖಂಡ್ ನಿಂದ ತಲಾ ಒಬ್ಬರು ಮಹಿಳಾ ಸದಸ್ಯರಿದ್ದರು.

ಈ ಹಿಂದೆ ಭದ್ರತಾಪಡೆಗಳ ಮೇಲೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಲ್ಲು ತೂರಿದ್ದು ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾನೊಬ್ಬ ಕಲ್ಲು ತೂರಾಟಗಾರಳೆಂದು ಬಿಂಬಿಸಲಾಯಿತು ಎಂದು ಹೇಳಿದ ಆಕೆ, ಆ ಘಟನೆ ನನ್ನ ಜೀವನವನ್ನೇ ಬದಲಾಯಿಸಿತು ಎಂದು ಹೇಳಿದ್ದಾಳೆ.

ಅಂದು ನಾನು ಮತ್ತು ನಮ್ಮ ತಂಡದ ಸದಸ್ಯರು ಅಭ್ಯಾಸ ಮಾಡಲು ಮೈದಾನಕ್ಕೆ ತೆರಳುತ್ತಿದ್ದೆವು, ಆ ಸಂದರ್ಭದಲ್ಲಿ ಪಕ್ಕದ ರಸ್ತೆಯಲ್ಲಿ ಭದ್ರತಾ ಪಡೆಗಳ ವಿರುದ್ಧ ಕಲ್ಲು ತೂರಾಟ ನಡೆಸುತ್ತಿದ್ದರು. ಮೈದಾನಕ್ಕೆ ಹೊರಟಿದ್ದ ನಮ್ಮನ್ನು ಪೊಲೀಸರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಲ್ಲಿಂದ ವಾಪಸ್ ಹೋಗುವಂತೆ ಹೇಳಿದರು. ಆ ಸಂದರ್ಭದಲ್ಲಿ ನನ್ನ ಆತ್ಮರಕ್ಷಣೆಗಾಗಿ ಕಲ್ಲು ಎಸೆಯಬೇಕಾಯಿತು.

ಆದರೆ ಮಾಧ್ಯಮಗಳಲ್ಲಿ ನಾನು ಕಲ್ಲು ತೂರಾಟ ಮಾಡುವವಳು ಎಂದು ಪ್ರಚಾರವಾಯಿತೇ ಹೊರತು, ನಾನೊಬ್ಬ ಫುಟ್ಬಾಲ್ ಆಟಗಾರ್ತಿ ಎಂಬುದು ಯಾರಿಗೂ ವಿಷಯವೇ ಆಗಲಿಲ್ಲ. ನಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಬೇಕೆಂಬ ಕನಸಿದೆ, ಇಲ್ಲಿಯವರೆಗೂ ಹೆಚ್ಚು ಬೆಂಬಲವಿಲ್ಲದೆ ಬಂದಿದ್ದೇನೆ, ಈ ಪ್ರಯಾಣವನ್ನು ಮುಂದುವರೆಸುತ್ತೇನೆ ಎಂದು ಆಕೆ ಹೇಳಿದ್ದಾಳೆ.

Get Latest updates on WhatsApp. Send ‘Subscribe’ to 8550851559