ನಟಿ ಅಪಹರಣ ಪ್ರಕರಣ, ನಟ ದಿಲೀಪ್ ಗೆ ಜೈಲೇ ಗತಿ – News Mirchi

ನಟಿ ಅಪಹರಣ ಪ್ರಕರಣ, ನಟ ದಿಲೀಪ್ ಗೆ ಜೈಲೇ ಗತಿ

ಮಲಯಾಳಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಿ ನಟ ದಿಲೀಪ್ ಗೆ ಜೈಲೇ ಗತಿ. ನಟನ ಜಾಮೀನು ಅರ್ಜಿಯನ್ನು ಸೋಮವಾರ ಅಲ್ಲಿನ ಹೈಕೋರ್ಟ್ ತಿರಸ್ಕರಿಸಿದೆ. ಕಳೆದ 10 ದಿನಗಳಿಂದ ಜೈಲಿನಲ್ಲಿ ಕಳೆಯುತ್ತಿರುವ ನಟ ದಿಲೀಪ್ ಗೆ ಜಾಮೀನು ನೀಡಲು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಿರಾಕರಿಸಿತ್ತು. ನಂತರ ನಟ ಹೈಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣದಲ್ಲಿ ನಟ ದಿಲೀಪ್ ಕೈವಾಡವಿರುವಂತೆ ಯಾವುದೇ ಸಾಕ್ಷಿಯಿಲ್ಲ, ಕೇವಲ ಪ್ರಮುಖ ಆರೋಪಿ ಹಾಗೂ ಕ್ರಿಮಿನಲ್ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಹೇಳಿಕೆಯ ಆಧಾರದ ಮೇಲೆಯೇ ನಟನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದ ದಿಲೀಪ್ ಪರ ವಕೀಲರ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

ಫೆಬ್ರವರಿ 17 ರಂದು ಚಿತ್ರೀಕರಣ ಮುಗಿಸಿ ಮನೆಗೆ ಹೊರಟಿದ್ದ ನಟಿಯ ಕಾರನ್ನು ತಡೆದು ಅಪಹರಿಸಿದ ಅಪರಿಚಿತರು, ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಕಿರುಕುಳ ನೀಡುವುದನ್ನೂ ವೀಡಿಯೋ ಮತ್ತು ಫೋಟೋ ತೆದಿದ್ದರು ಎಂದು ಆರೋಪಿಸಲಾಗಿದೆ.

1.5 ಕೋಟಿ ರೂಪಾಯಿಗಾಗಿ ಅಪಹರಣಕಾರರು ದಿಲೀಪ್ ಮತ್ತು ಅವರ ಸ್ನೇಹಿತ ಹಾಗೂ ನಿರ್ದೇಶಕ ನಾದಿರ್ ಶಾ ಅವರನ್ನು ಬ್ಲಾಕ್ ಮೇಲ್ ಮಾಡಿದ ನಂತರ ಕಳೆದ ತಿಂಗಳು ಪೊಲೀಸರು ದಿಲೀಪ್ ನನ್ನು 13 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು. ಪಲ್ಸರ್ ಸುನಿ ಆಗಾಗ ದಿಲೀಪ್ ಚಿತ್ರಗಳ ಚಿತ್ರೀಕರಣ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದು ಪೊಲೀಸರಿಗೆ ತಿಳಿದು ಬಂದಿತ್ತು. ಹೀಗಾಗಿ ದಿಲೀಪ್ ಹಾಗೂ ಪಲ್ಸರ್ ಸುನಿಗೆ ಪರಿಚಯವಿರುವುದು ಸಾಬೀತಾಗಿತ್ತು. ಕಳೆದ ವಾರ ದೊಡ್ಡ ತಿಮಿಂಗಲವೊಂದು ಬಲೆಗೆ ಬೀಳಲಿದೆ ಎಂದು ಪಲ್ಸರ್ ಸುನಿ ಮಾಧ್ಯಮಗಳಿಗೆ ಹೇಳಿದ್ದ.

ಪೊಲೀಸರ ಪ್ರಕಾರ, ನಟಿಯ ಮೇಲೆ ದಾಳಿ ನಡೆಸಲು ಪಲ್ಸರ್ ಸುನಿಗೆ ಹಣ ನೀಡಲಾಗಿತ್ತು. ದಿಲೀಪ್ ಹೆಸರನ್ನು ಸುನಿ ಹೇಳಿದ ಹಿನ್ನೆಲೆಯಲ್ಲಿ, ದಿಲೀಪ್ ಪತ್ನಿಗೆ ಸೇರಿದ ಬೊಟಿಕ್ ಮೇಲೆ ಕೇರಳ ಪೊಲೀರು ದಾಳಿ ನಡೆಸಿ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದರು.

Loading...