ಕಣ್ಣಿಗೆ ಕಣ್ಣೆಂದರೆ ವಿಶ್ವವೇ ಕುರುಡು, ಕೊಲೆಗೆ ಕೊಲೆ ಉತ್ತರವಲ್ಲ : ಸಂಸದ ಪ್ರತಾಪ್ ಸಿಂಹ |News Mirchi

ಕಣ್ಣಿಗೆ ಕಣ್ಣೆಂದರೆ ವಿಶ್ವವೇ ಕುರುಡು, ಕೊಲೆಗೆ ಕೊಲೆ ಉತ್ತರವಲ್ಲ : ಸಂಸದ ಪ್ರತಾಪ್ ಸಿಂಹ

ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರು ಕಗ್ಗೊಲೆಯಾದ ದಿನದಂದೇ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಬಷೀರ್ ಎಜೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಬಷೀರ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಕಣ್ಣಿಗೆ ಕಣ್ಣು ಎಂದರೆ ಇಡೀ ವಿಶ್ವವೇ ಕುರಡಾಗುತ್ತದೆ, ದೀಪಕ್ ಹತ್ಯೆಗೆ ಬಶೀರ್ ಹತ್ಯೆ ಉತ್ತರವಲ್ಲ ಎಂದು ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಸೇರಿ ಶಾಂತಿ ಸಭೆ ನಡೆಸಲು ಇದು ಸಮಯ ಎಂದು ಅಭಿಪ್ರಾಯಪಟ್ಟ ಸಂಸದರು, ಈ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಜನವರಿ 3 ರಂದು ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ನನ್ನು ಮಂಗಳೂರಿನ ಕಾಟಿಪಳ್ಳ ಬಳಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದಿದ್ದರು.

ಅಂದು ರಾತ್ರಿ ನಗರದ ಕೊಟ್ಟಾರ ಬಳಿ ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ವಾಪಸಾಗುತ್ತಿದ್ದ ಅಬ್ದುಲ್ ಬಶೀರ್ ಎಂಬಾತನ ಮೇಲೆ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರ ಗಾಯಗೊಂಡು ನಗರದ ಎಜೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಶೀರ್ ಇಂದು ಸಾವನ್ನಪ್ಪಿದ್ದಾರೆ. ಇನ್ನು ದೀಪಕ್ ಕೊಲೆ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು, ಬಶೀರ್ ಕೊಲೆಗೆ ಸಂಬಂಧಿಸಿದಂತೆಯೂ ನಾಲ್ವರನ್ನು ಬಂಧಿಸಿದ್ದಾರೆ.

ಬಶೀರ್ ಕುಟುಂಬಕ್ಕೆ ಸರ್ಕಾರವು 10 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ 5 ಲಕ್ಷ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ನೀಡುವುದಾಗಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!