ಮಧ್ಯರಾತ್ರಿ ರಸ್ತೆಗಿಳಿದ ಕಿರಣ್ ಬೇಡಿ

ಪುದುಚ್ಚೇರಿ: ರಾತ್ರಿ ವೇಳೆ ಮಹಿಳೆಯರು ಧೈರ್ಯವಾಗಿ ತಿರುಗಾಡಬಲ್ಲರಾ, ಯಾವ ರೀತಿಯ ರಕ್ಷಣೆ ಇದೆ ಎಂದು ಸ್ವತಃ ಪುದುಚ್ಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಯವರೇ ರಾತ್ರಿ ವೇಳೆ ರಸ್ತೆಗಿಳಿದು ಸ್ವತಃ ಪರಿಶೀಲಿಸಿದ್ದಾರೆ. ತಮ್ಮ ಸಹಾಯಕಿಯೊಂದಿಗೆ ಸೇರಿ ಸ್ಕೂಟಿಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿಯ ಮುಖ್ಯರಸ್ತೆ, ಗಲ್ಲಿಗಳಲ್ಲಿ ಕಿರಣ್ ಬೇಡಿ ಸುತ್ತಾಡಿದರು. ತಮ್ಮನ್ನು ಯಾರೂ ಗುರುತು ಹಿಡಿಯದಿರಲಿ ಎಂದು ಶಾಲು ಹೊದ್ದುಕೊಂಡಿದ್ದರು. ನಂತರ ಮಾತನಾಡಿದ ಕಿರಣ್ ಬೇಡಿ, “ಪುದುಚ್ಚೇರಿಯಲ್ಲಿ ಮಹಿಳೆಯರು ಸುರಕ್ಷಿತ, ಆದರೂ ಭದ್ರತೆಯನ್ನು ಮತ್ತಷ್ಟು ಉತ್ತಮಗೊಳಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಜನರಿಗೆ ಏನಾದರೂ ಸಮಸ್ಯೆಗಳಿದ್ದರೆ ಪಿಸಿಆರ್ ಅಥವಾ 100 ಕ್ಕೆ ಕರೆ ಮಾಡಬೇಕು ಎಂದು ಸೂಚಿಸಿದರು.

ನಗರದಲ್ಲಿ ಮಹಿಳೆಯರಿಗೆ ಇರುವ ರಕ್ಷಣೆಯನ್ನು ಪರಿಶೀಲಿಸಲು ರಸ್ತೆಗಿಳಿದ ಕಿರಣ್ ಬೇಡಿಯವರ ಪ್ರಯತ್ನವನ್ನು ಹಲವರು ಪ್ರಶಂಸಿಸಿದ್ದಾರೆ. ಆದರೆ ಸ್ಕೂಟಿಯನ್ನು ಚಲಾಯಿಸುತ್ತಿದ್ದ ಮಹಿಳೆ ಮತ್ತು ಕಿರಣ್ ಬೇಡಿ ಹೆಲ್ಮೆಟ್ ಧರಿಸದಿದ್ದರ ಬಗ್ಗೆ ಕೆಲವರ ಟೀಕೆಗಳನ್ನೂ ಎದುರಿಸಬೇಕಾಯಿತು. ರಾತ್ರಿ ವೇಳೆ ತಾವು ಅಸಹಾಯಕರಾಗಿ ಕಾಣಿಸಲೆಂದೇ ತಾವು ಹೆಲ್ಮೆಟ್ ಧರಿಸಲಿಲ್ಲ ಎಂದು ಕಿರಣ್ ಬೇಡಿ ಸ್ಪಷ್ಟನೆ ನೀಡಿದ್ದಾರೆ.