ಸತ್ತ ಗಂಡ ಬಂದು ಆ ಹಣ ಪಡೆದಿದ್ದು ಹೇಗೆ? – News Mirchi

ಸತ್ತ ಗಂಡ ಬಂದು ಆ ಹಣ ಪಡೆದಿದ್ದು ಹೇಗೆ?

ನವದೆಹಲಿ: ಮೂರು ವರ್ಷಗಳ ಹಿಂದೆ ಸಾವನ್ನಪ್ಪಿರುವ ತನ್ನ ಪತಿ ಅದು ಹೇಗೆ ರಾಷ್ಟ್ರೀಯ ಉಳಿತಾಯ ಪತ್ರ(ಎನ್.ಎಸ್.ಸಿ)ಗಳ ಹಣವನ್ನು ಪಡೆದಿದ್ದಾರೆ ಎಂದು ಪ್ರಶ್ನಿಸಿ ಮಹಿಳೆಯೊಬ್ಬರು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ಮೊರೆ ಹೋಗಿದ್ದಾರೆ. ಮಹಿಳೆಯ ಮನಿವಗೆ ಸ್ಪಂದಿಸಿರುವ ಕೇಂದ್ರ ಮಾಹಿತಿ ಆಯೋಗ ಕೂಡಲೇ ಈ ವಿಷಯದ ಕುರಿತು ತನಿಖೆಗೆ ಆದೇಶಿಸಿದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಟಿ.ಸುಬ್ಬಮ್ಮ ಎಂಬ ಮಹಿಳೆಯ ಪತಿ ಆದಿಶೇಷಯ್ಯ ರೂ.10 ಸಾವಿರ ಮೌಲ್ಯದ ಎರಡು ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಖರೀದಿಸಿದ್ದರು. 2004 ರಲ್ಲಿ ಆತ ಸಾವನ್ನಪ್ಪಿದ್ದ. ಅಂದಿನಿಂದ ಆತನ ಪತ್ನಿ ಈ ಹಣವನ್ನು ಪಡೆಯಲು ಅನೇಕ ಬಾರಿ ಕರ್ನೂಲು ಅಂಚೆ ಕಛೇರಿಗೆ ಅಲೆದಿದ್ದಳು. ಆದರೂ ಯಾರೂ ಸರಿಯಾಗಿ ಸ್ಪಂದಿಸಿರಲಿಲ್ಲ. ಕೆಲ ವರ್ಷಗಳ ನಂತರ ಉತ್ತರಿಸಿದ ಅಂಚೆ ಕಛೇರಿ ಸಿಬ್ಬಂದಿ, 2007 ರಲ್ಲಿ ಆಕೆಯ ಪತಿ ಈ ಹಣವನ್ನು ಬಡ್ಡಿ ಸಮೇತ ಹಿಂತೆಗೆದುಕೊಂಡಿರುವುದಾಗ ಹೇಳಿದರು.

ಆದರೆ 2004 ರಲ್ಲಿ ಸಾವನ್ನಪ್ಪಿದ ತನ್ನ ಗಂಡ 2007 ರಲ್ಲಿ ಅದು ಹೇಗೆ ಹಣ ಪಡೆಯಲು ಸಾಧ್ಯ ಎಂದು ಸುಬ್ಬಮ್ಮ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದಾರೆ. ಅಲ್ಲಿಂದಲೂ ಸೂಕ್ತ ಸ್ಪಂದನೆ ಇಲ್ಲದ ಕಾರಣ, ಸಿಐಸಿ ಮೊರೆ ಹೋಗಿದ್ದಳು. ಸತ್ತ ಮೂರು ವರ್ಷಗಳ ನಂತರ ಅಂಚೆ ಕಛೇರಿಗೆ ಹೋಗಿ ಬಡ್ಡಿ ಸಮೇತ ರೂ.50 ಸಾವಿರ ಪಡೆದಿದ್ದು ಹೇಗೆ ಎಂದು ಹೇಳಬೇಕು ಎಂದು ಆಕೆ ಪ್ರಶ್ನಿಸಿದ್ದಾರೆ.

ತಮ್ಮ ಸಂಬಂಧಿಕರ ಸಹಾಯದಿಂದ ಅಂಚೆ ಕಛೇರಿ ಸಿಬ್ಬಂದಿ ಅಕ್ರಮ ನಡೆಸಿದ್ದಾರೆ ಎಂದು ಆಕೆಯ ಪುತ್ರ ಆರೋಪಿಸುತ್ತಿದ್ದಾರೆ. ನವೆಂಬರ್ 1 ರೊಳಗೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು ಎಂದು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಗೆ ಸಿಐಸಿ ಆದೇಶಿಸಿದೆ.

Get Latest updates on WhatsApp. Send ‘Add Me’ to 8550851559

Loading...