ಎಟಿಎಂ ದರೋಡೆಗೆ ಉಗ್ರರಿಗೆ ನೆರವು ನೀಡಿದ್ದವನ ಬಂಧನ

ಶ್ರೀನಗರ:ಭಾರತೀಯ ಯೋಧರಿಂದ ಕಳೆದ ತಿಂಗಳು ಹತನಾಗಿದ್ದ ಉಗ್ರ ಬಷೀರ್ ಲಷ್ಕರಿ ಆಶ್ರಯಕ್ಕೆ ಸಹಾಯ ಮಾಡಿದ್ದ ಮತ್ತು ಎಟಿಎಂ ದರೋಡೆಗೆ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾ ಸಂಘಟನೆಗೆ ಸಹಾಯ ಮಾಡಿದ್ದನೆಂದು ಹೇಳಲಾಗುತ್ತಿರುವ ವ್ಯಕ್ತಿಯನ್ನು ಸೋಮವಾರ ಜಮ್ಮೂ ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮುಝಫರ್ ನಗರ್ ಮೂಲದ ಬಂಧಿತ ವ್ಯಕ್ತಿ ಸಂದೀಪ್ ಶರ್ಮ ಮತ್ತು ಅದಿಲ್ ಎಂಬ ಎರಡು ಹೆಸರುಗಳಿಂದ ವಾಸಿಸುತ್ತಿದ್ದ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಮುನೀರ್ ಖಾನ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಬಷೀರ್ ಲಷ್ಕರಿಯನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು. ಈ ಹಿಂದೆ 6 ಪೊಲೀಸ್ ಸಿಬ್ಬಂದಿಯನ್ನು ಕೊಂದಿದ್ದರ ಹಿಂದಿನ ಪ್ರಮುಖ ಸೂತ್ರಧಾರ ಲಷ್ಕರಿ ಹತ್ಯೆ ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು ಎಂದೇ ಪರಿಗಣಿಸಲಾಗಿತ್ತು.