ದೇಶಾದ್ಯಂತ ಜನೌಷಧಿ ಮಳಿಗೆ, ಅಗ್ಗದ ದರದಲ್ಲಿ ಔಷಧಿ

ಬಡ, ಮಧ್ಯಮವರ್ಗದ ಜನರಿಗೆ ಮತ್ತಷ್ಟು ಅನುಕೂಲವಾಗುವಂತೆ ದೇಶಾದ್ಯಂತ ಜನೌಷಧಿ ಮಳಿಗೆಗಳನ್ನು ಆರಂಭಿಸುತ್ತಿರುವುದಾಗಿ ಕೇಂದ್ರ ಸಚಿವ ಮನಸುಖ್ ಮಾಂಡವಿಯಾ ಹೇಳಿದ್ದಾರೆ. ಸ್ಥಳೀಯ ಬಿಜೆಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡುಬಡವ, ಬಡ ಮತ್ತು ಮಧ್ಯಮವರ್ಗದ ಜನರ ಪ್ರಗತಿಗಾಗಿ ಬಿಜೆಪಿ ಸರ್ಕಾರ ಶ್ರಮಿಸಲಿದೆ ಎಂದರು. ಜನರಿಕ್ ಜನೌಷಧಿ ಮಳಿಗೆಗಳು ಶೀಘ್ರದಲ್ಲಿಯೇ ದೇಶಾದ್ಯಂತ ಆರಂಭವಾಗಲಿದ್ದು ಶೇ.50 ರಷ್ಟು ಕಡಿಮೆ ದರದಲ್ಲಿ ಔಷಧಿಗಳು ಲಭಿಸುತ್ತವೆ ಎಂದರು. ಹಾಗೆಯೇ ಬಿಪಿ, ಶುಗರ್ ಔಷಧಿಗಳ ದರಗಳೂ ಕಡಿಮೆಯಾಗುತ್ತಿವೆ. ಈಗಾಗಲೇ ಹೃದಯಕ್ಕೆ ಸಂಬಂಧಿಸಿದ ಸ್ಟಂಟ್ ಗಳ ದರಗಳನ್ನು ಕಡಿತಗೊಳಿಸಿರುವುದಾಗಿ ಅವರು ಹೇಳಿದರು.

ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆಯಲ್ಲಿ ಯೂರಿಯಾ ಬೆಲೆ ಒಂದು ಚೀಲಕ್ಕೆ ರೂ.700 ಇತ್ತು, ಅದರೆ ಇದನ್ನು ಕೈಗಾರಿಕೆಗಳಿಗೆ ನೀಡುತ್ತಾ ರೈತರಿಗೆ ಸಿಗದಂತೆ ಮಾಡುತ್ತಿದ್ದರು. ಇದನ್ನು ತಡೆಯಲು ಬೇವಿನ ಲೇಪನ ಮಾಡಿಸಿದೆವು. ಕೃಷಿಗೆ ಹೊರತು ಪಡಿಸಿ ಬೇರೆ ಯಾವುದಕ್ಕೂ ಈ ಯೂರಿಯಾ ಬಳಕೆಯಾಗದಂತೆ ಮಾಡಲಾಯಿತು. ಇಂತಹ ವಿಧಾನಗಳ ಮೂಲಕ ರೈತರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕೆಕಸ ಮಾಡುತ್ತಿದ್ದಾರೆ ಎಂದರು.