ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ: ದಿನಕರನ್ ವಿರುದ್ಧ ಲುಕೌಟ್ ನೋಟೀಸ್ – News Mirchi

ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ: ದಿನಕರನ್ ವಿರುದ್ಧ ಲುಕೌಟ್ ನೋಟೀಸ್

ಅಣ್ಣಾ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ, ಶಶಿಕಲಾ ಸೋದರಳಿಯ ಟಿಡಿವಿ ದಿನಕರನ್ ಗೆ ಸಂಕಷ್ಟ ಎದುರಾಗಿದೆ. ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ರೂ. 50 ಕೋಟಿ ಲಂಚ ನೀಡಲು ಪ್ರಯತ್ನಿಸಿದ ಆರೋಪದ ಮೇಲೆ ಈಗಾಗಲೇ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಆದರೆ ದಿನಕರನ್ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ದಿನಕರನ್ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿ ಮಾಡಿರುವುದಾಗಿ ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಿಗೆ ಮಾಹಿತಿ ರವಾನಿಸಿದ್ದಾರೆ. ದಿನಕರನ್ ವಿಮಾನವೇರಲು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಇಮ್ಮಿಗ್ರೇಷನ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದಿನಕರನ್ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಿನಕರನ್ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇದೆ ಎಂದು ದಿನಕರನ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ ಎನ್ನಲಾಗಿದೆ.

ಆರ್.ಕೆ ನಗರ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಎಲೆಗಳ ಚುನಾವಣಾ ಚಿಹ್ನೆಯನ್ನು ನೀಡಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ರೂ. 50 ಕೋಟಿಗಳನ್ನು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ಮೂಲಕ ಲಂಚ ನೀಡಲು ಯತ್ನಿಸಿರುವ ಆರೋಪ ದಿನಕರನ್ ಮೇಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ದೆಹಲಿ ಪೊಲೀಸರು ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದರ ಬೆನ್ನಲ್ಲೇ ಎರಡಾಗಿದ್ದ ಅಣ್ಣಾಡಿಎಂಕೆ ಬಣಗಳು ಮತ್ತೆ ಒಂದಾಗಲು ರಾಜಿಯಾಗಿವೆ. ಆದರೆ ಪಕ್ಷ ಚಟುವಟಿಕೆಗಳಿಂದ ಶಶಿಕಲಾ ವರ್ಗವನ್ನು ಸಂಪೂರ್ಣವಾಗಿ ದೂರವಿಟ್ಟರೆ ಮಾತ್ರ ತಾವು ರಾಜಿಗೆ ಸಿದ್ಧ ಎಂದು ಪನ್ನೀರ್ ಸೆಲ್ವಂ ಬಣ ಷರತ್ತು ವಿಧಿಸಿತ್ತು. ಅದರಂತೆ ಶಶಿಕಲಾ ವರ್ಗವನ್ನು ದೂರವಿಡಲು ಪಳನಿಸ್ವಾಮಿ ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ದಿನಕರನ್ ಗೆ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ.

Loading...