ಬಾಹ್ಯಾಕಾಶ ಯಾನಕ್ಕೆ ಮತ್ತೊಬ್ಬ ಭಾರತೀಯ

ವಾಷಿಂಗ್ಟನ್, ಜೂನ್ 8: ಬಾಹ್ಯಾಕಾಶ ಅಧ್ಯಯನಕ್ಕಾಗಿ ಬಾಹ್ಯಾಕಾಶ ಸಂಸ್ಥೆ ನಾಸಾ ಕಳುಹಿಸುತ್ತಿರುವ 12 ಗಗನಯಾತ್ರಿಗಳ ತಂಡದಲ್ಲಿ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಗೆ ಅವಕಾಶ ಲಭಿಸಿದೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ನಂತರ ರಾಜಾಚಾರಿ ಎಂಬುವವರು ಈ ಬಾರಿ ಗಗನಯಾತ್ರಿಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಮೆರಿಕಾ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜಾಚಾರಿ, ನಾಸಾದ ಗಗನಯಾತ್ರಿಗಳ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂದೆ ನಾಸಾ ಕೈಗೊಳ್ಳಲಿರುವ ದೀರ್ಘ ಕಾಲದ ಬಾಹ್ಯಾಕಾಶ ಯಾನಕ್ಕಾಗಿ ಆಯ್ಕೆಯಾದ 12 ಜನರಲ್ಲಿ ರಾಜಾಚಾರಿಯೂ ಒಬ್ಬರು.

18,300 ಅರ್ಜಿಯಗಳು ಈ ಯಾನಕ್ಕಾಗಿ ಸ್ವೀಕರಿಸಲಾಗಿದ್ದು, ಅದರಲ್ಲಿ 12 ಜನರನ್ನು ಆಯ್ಕೆ ಮಾಡಲಾಗಿದೆ. 39 ವರ್ಷಗಳ ರಾಜಾಚಾರಿ, ಆಸ್ಟ್ರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದ ನಂತರ ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಅಮೆರಿಕಾ ವಾಯುಪಡೆಯ ಟೆಸ್ಟ್ ಪೈಲಟ್ ಸ್ಕೂಲ್ ನಲ್ಲಿ ತರಬೇತಿಯ ನಂತರ ಅವರು ವಾಯುಪಡೆಗೆ ಸೇರ್ಪಡೆಯಾಗಿದ್ದರು.

ಸದ್ಯ ಕ್ಯಾಲಿಫೋರ್ನಿಯಾದ ಎಡ್ವರ್ಡ್ ಏರ್ ಫೋರ್ಸ್ ಬೇಸ್ ನಲ್ಲಿ 461 ಫ್ಲೈಟ್ ಟೆಸ್ಟ್ ಸ್ಕ್ವಾಡ್ರನ್ ಕಮಾಂಡರ್ ಆಗಿ, ಎಫ್-35 ಇಂಟಿಗ್ರೇಟೆಡ್ ಟೆಸ್ಟ್ ಫೋರ್ಸ್ ಡೈರೆಕ್ಟರ್ ಆಗಿ ಮುಂದುವರೆಯುತ್ತಿದ್ದಾರೆ. ಈ ಹಿಂದೆ ಇರಾಕ್ ಕಾರ್ಯಚರಣೆಯಲ್ಲಿಯೂ ಪಾಲ್ಗೊಂಡ ಅನುಭವ ಅವರಿಗಿದೆ.