ಆಪ್ ರ‌್ಯಾಲಿಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಹಿಳೆ ಸಾವು

ಲೂಧಿಯಾನಾ: ಜನಸಾಮಾನ್ಯರ ಪಕ್ಷ ಎಂದು ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷ ಭಾನುವಾರ ಮಧ್ಯಾಹ್ನ ನಡೆಸಿದ ಗಿಲ್ ರಸ್ತೆಯ ರ‌್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್ ನಲ್ಲಿ ಆಂಬ್ಯುಲೆನ್ಸ್ ಒಂದು ಸಿಲುಕಿ, ಅದರಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಅವತಾರ್ ಕೌರ್ ಎಂಬ ಮಹಿಳೆ ಮಧುಮೇಹ, ವಾಂತಿ ಭೇದಿಗಳಿಂದ ಬಳಲುತ್ತಿದ್ದು, ಆಕೆಯನ್ನು ಗಿಲ್ ರಸ್ತೆಯ ಗ್ರೇವಾಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಆಕೆಯ ಅರೋಗ್ಯ ಕ್ಷೀಣಿಸಿದ್ದರಿಂದ ಅಲ್ಲಿನ ವೈದ್ಯರು ಮಾಡೆಲ್ ಟೌನ್ ನ ಕೃಷ್ಣಾ ಅಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಆತುರಾತುರವಾಗಿ ಮಹಿಳೆಯನ್ನು ಆ ಅಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ನಲ್ಲಿ ತೆರಳಿದರು. ಆದರೆ ಗಿಲ್ ರಸ್ತೆಯಲ್ಲಿ ನಡೆಯುತ್ತಿದ್ದ ಆಪ್ ರ‌್ಯಾಲಿಯಿಂದ ಉಂಟಾದ ಭಾರೀ ಟ್ರಾಫಿಕ್ ನಿಂದಾಗಿ ಅಂಬ್ಯುಲೆನ್ಸ್ ಮುಂದೆ ಸಾಗಲು ಆಗದೆ ಸಿಲುಕಿತು. ಅಂಬ್ಯುಲೆನ್ಸ್ ಗೆ ದಾರಿ ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಲ್ಲಿನ ಜನ ಕಿವಿಗೊಡಲಿಲ್ಲ. ಈ ರ‌್ಯಾಲಿಯಲ್ಲಿ ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಪಾಲ್ಗೊಂಡಿದ್ದರು.

ಕೊನೆಗೆ ಅಂಬ್ಯುಲೆನ್ಸ್ ನಲ್ಲಿದ್ದ ಮಹಿಳೆ ಅಲ್ಲಿಯೇ ಸಾವನ್ನಪ್ಪಿದ್ದು, ನಂತರ ಕುಟುಂಬ ಸದಸ್ಯರು ಸ್ವಲ್ಪ ಹೊತ್ತು ರಸ್ತೆಯಲ್ಲಿಯೇ ಪ್ರತಿಭಟನೆಗೆ ಇಳಿದರು.