ಜನರನ್ನು ರಕ್ಷಿಸಲು 10 ಕೆಜಿ ತೂಕದ ಬಾಂಬ್ ಹಿಡಿದು 1 ಕಿಲೋಮೀಟರ್ ಓಡಿದ ಪೊಲೀಸ್ |News Mirchi

ಜನರನ್ನು ರಕ್ಷಿಸಲು 10 ಕೆಜಿ ತೂಕದ ಬಾಂಬ್ ಹಿಡಿದು 1 ಕಿಲೋಮೀಟರ್ ಓಡಿದ ಪೊಲೀಸ್

ಜನರ ಜೀವ ಉಳಿಸಲು ಸರ್ಕಾರಿ ಪಾಠಶಾಲೆ ಆವರಣದಲ್ಲಿ ಪತ್ತೆಯಾದ ಬೃಹತ್ ಬಾಂಬನ್ನು ತಮ್ಮ ಜೀವ ಒತ್ತೆಯಿಟ್ಟು ಜನವಸತಿ ಪ್ರದೇಶದಿಂದ ಒಂದು ಕಿ.ಮೀ ದೂರ ಹೊತ್ತೊಯ್ದ ಪೊಲೀಸ್ ಪೇದೆಯೊಬ್ಬರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಚಿರೋಟಾದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಗ್ರಾಮದ ಹೃದಯಭಾಗದಲ್ಲಿರುವ ಸರ್ಕಾರಿ ಪಾಠಶಾಲೆಯ ಆವರಣದಲ್ಲಿ ಅನುಮಾನಾಸ್ಪದ ವಸ್ತುವನ್ನು ಗ್ರಾಮಸ್ಥರು ಗುರುತಿಸಿ 100 ಕ್ಕೆ ಕರೆ ಮಾಡಿದ್ದರು. ಕೆಲ ಹೊತ್ತಿನಲ್ಲೇ ಅಲ್ಲಿಗೆ ಮುಖ್ಯ ಪೇದೆ ಅಭಿಷೇಕ್ ಪಟೇಲ್ ನೇತೃತ್ವದ ಪೊಲೀಸ್ ತಂಡ ಧಾವಿಸಿತು. ಅಷ್ಟರಲ್ಲಿ ಮಾಧ್ಯಮಗಳೂ ಅಲ್ಲಿ ಸೇರಿದ್ದವು. ಶಾಲೆಯ ಹಿಂಭಾಗದಲ್ಲಿದ್ದ ಆ ಅನುಮಾನಾಸ್ಪದ ವಸ್ತು ಬಾಂಬ್ ಎಂದು ಗುರುತಿಸಿದ ಕೂಡಲೇ ಕೂಡಲೇ ಪೇದೆ, ಕೈಯಲ್ಲಿ ಆ ಬಾಂಬ್ ಹಿಡಿದು ಓಡಲು ಆರಂಭಿಸಿದರು. ಹಾಗೆ ಎಲ್ಲಿಯೂ ನಿಲ್ಲದೆ ಸುಮಾರು ಒಂದು ಕಿಲೋ ಮೀಟರ್ ದೂರ ಓಡಿ, ಬಾಂಬನ್ನು ಜನವಸತಿ ಪ್ರದೇಶದಿಂದ ದೂರ ಹೊತ್ತೊಯ್ದರು.

ಜನರಿಗೆ ಏನು ನಡೆಯುತ್ತಿದೆ ಎಂಬುದೇ ಅಲ್ಲಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಅರ್ಥವಾಗಲಿಲ್ಲ. ಆದರೆ ಸ್ಥಳೀಯರೊಬ್ಬರು ಆ ದೃಶ್ಯವನ್ನು ಸೆರೆಹಿಡಿದಿದ್ದು, ಆ ವೀಡಿಯೋ ಇದೀಗ ವೈರಲ್ ಆಗಿದೆ.

ಸುಮಾರು 12 ಇಂಚು ಗಾತ್ರದ 10 ಕೆಜಿ ತೂಕದ ಬಾಂಬ್ ಸ್ಪೋಟಗೊಂಡಿದ್ದರೆ 500 ಕಿಮೀ ದೂರದವರೆಗೂ ಅದರ ಪ್ರಭಾವವಿರುತ್ತಿತ್ತು ಎಂದು ಮುಖ್ಯಪೇದೆ ಹೇಳಿದ್ದಾರೆ. ಕಳೆದ ವರ್ಷ ಬಾಂಬ್ ನಿಷ್ಕ್ರಿಯ ದಳದಲ್ಲಿ ತರಬೇತಿ ಪಡೆದಿದ್ದೆ, ಸ್ಪೋಟದ ತೀವ್ರತೆಯನ್ನು ಕಡಿಮೆ ಮಾಡಲೆಂದೇ ಬಾಂಬನ್ನು ಹಿಡಿದು ದೂರ ಓಡಿದ್ದಾಗಿ ಅವರು ವಿವರಿಸಿದರು.

ಬಾಂಬ್ ಪತ್ತೆಯಾದ ಸಮಯದಲ್ಲಿ ಶಾಲಾ ಆವರಣದಲ್ಲಿ ಮಕ್ಕಳು, ಕಂಪೌಂಡ್ ಗೆ ಹೊಂದಿಕೊಂಡಂತೆ ಇರುವ ಮನೆಗಳಲ್ಲಿನ ಜನ ಸೇರಿ ಒಟ್ಟು 400 ಜನರಿರುತ್ತಾರೆ. ಒಂದು ವೇಳೆ ಬಾಂಬ್ ಸ್ಪೋಟಿಸಿದ್ದರೆ ಆಗುತ್ತಿದ್ದ ನಷ್ಟ ತುಂಬಾ ಹೆಚ್ಚಿನದಾಗಿರುತ್ತಿತ್ತು. ಶಾಲೆಗೆ ಬಾಂಬ್ ಹೇಗೆ ಬಂತು ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಚಿಟೋರಾ ಗ್ರಾಮದ ಸಮೀಪವೇ ಇಂಡಿಯನ್ ಆರ್ಮಿ ಕ್ಯಾಂಪ್ ಇರುವುದರಿಂದ ಈ ಕೃತ್ಯದಲ್ಲಿ ಉಗ್ರರ ಕೈವಾಡವಿದೆಯಾ ಎಂಬ ಕೋನದಿಂದಲೂ ತನಿಖೆ ನಡೆಸುತ್ತಿರುವುದಾಗಿ ಸಾಗರ್ ಬ್ಲಾಕ್ ಹಿರಿಯ ಅಧಿಕಾರಿ ಸತೀಶ್ ಸಕ್ಸೇನಾ ಹೇಳಿದ್ದಾರೆ. ಸಾಹಸ ಮೆರೆದ ಪೊಲೀಸ್ ಪೇದೆ ಅಭಿಷೇಕ್ ಅವರನ್ನು ಅವರು ಅಭಿನಂದಿಸಿದರು.

Loading...
loading...
error: Content is protected !!