ರೈತರಿಗೆ ಪ್ರತಿಭಟನೆಗೆ ಮಣಿದ ಮಹಾರಾಷ್ಟ್ರ ಸರ್ಕಾರ, ಕೃಷಿ ಸಾಲ ಮನ್ನಾ

ಮುಂಬೈ: ಮಹಾರಾಷ್ಟ್ರ ರೈತರ ಪ್ರತಿಭಟನೆಗೆ ಆಡಳಿತ ಬಿಜೆಪಿ ಸರ್ಕಾರ ಮಣಿದಿದೆ. ರೈತರ ಸಾಲ ಮನ್ನಾ ಮಾಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹತ್ತು ದಿನಗಳ ಹಿಂದೆ ಪ್ರತಿಭಟನೆಗೆ ಕರೆ ನೀಡಿದ್ದು, ಸೋಮವಾರದಿಂದ ರೈಲ್ ತಡೆ ಮುಂತಾದವುಗಳ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಸಂಘಟನೆಗಳು ಎಚ್ಚರಿಸಿದ್ದವು. ಇದೀಗ ಸರ್ಕಾರ ರೈತರ ಬೇಡಿಕೆಯನ್ನು ಈಡೇರಿಸಲು ಅಂಗೀಕರಿಸಿದೆ. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆದಿರುವ ರೈತ ಸಂಘಟನೆಗಳು ಜುಲೈ 26ರೊಳಗೆ ಸಾಲ ಮನ್ನಾ ತೀರ್ಮಾನವನ್ನು ಜಾರಿ ಮಾಡಬೇಕೆಂದು ರೈತರು ಗಡುವು ವಿಧಿಸಿದ್ದಾರೆ.

ರಾಜ್ಯ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ನೇತೃತ್ವದಲ್ಲಿ ಭಾನುವಾರ ನಡೆದ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಮಾಡಿದವರನ್ನು ಹೊರತು ಪಡಿಸಿ ಉಳಿದ ಎಲ್ಲಾ ರೈತರ ಮೇಲಿನ ಕೇಸುಗಳನ್ನು ಹಿಂತೆದುಕೊಳ್ಳುತ್ತಿರುವುದಾಗಿ ಪಾಟೀಲ್ ಪ್ರಕಟಿಸಿದರು. ಕೃಷಿ ಸಾಲಗಳ ಮನ್ನಾದಿಂದಾಗಿ ಮಹಾರಾಷ್ಟ್ರ ರೈತರಿಗೆ ರೂ.1.1 ಲಕ್ಷ ಕೋಟಿ ಯಷ್ಟು ಲಾಭವಾಗಲಿದೆ.

Related News