ಭಾರತದಲ್ಲಿ 32 ಲಕ್ಷ ಡೆಬಿಟ್ ಕಾರ್ಡುಗಳು ಹ್ಯಾಕ್

ಆನ್ಲೈನ್ ಭದ್ರತೆಗೆ ಸವಾಲೆಸೆದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬೆಳಕಿಗೆ ಬಂದ ಅತಿ ದೊಡ್ಡ ಸೈಬರ್ ದಾಳಿ ಕುರಿತು ಹಿಟಾಚಿ ಪೇಮೆಂಟ್ ಸರ್ವೀಸಸ್ ಪ್ರತಿಕ್ರಿಯಿಸಿದೆ. ಭಾರತದಲ್ಲಿ 32 ಲಕ್ಷ ಡೆಬಿಟ್ ಕಾರ್ಡುಗಳು ಹ್ಯಾಕ್ ಆಗಿವೆ ಎಂದು ಹಿಟಾಚಿ ಪೇಮೆಂಟ್ ಸರ್ವೀಸಸ್ ಒಪ್ಪಿಕೊಂಡಿದೆ.

ಎಸ್ ಬ್ಯಾಂಕ್ ಗೆ ಸೇವೆ ನೀಡುತ್ತಿರುವ ಹಿಟಾಚಿ ಪೇಮೆಂಟ್ ಸರ್ವೀಸಸ್ ಎಂಬ ಸಂಸ್ಥೆಯ ಕಂಪ್ಯೂಟರ್ ಗಳ ಒಳಗೆ ಮಾಲ್ ವೇರ್ ಕಳುಹಿಸಿ ಖಾತೆದಾರರ ಮಾಹಿತಿಯನ್ನು ಕದ್ದು ಸಂಗ್ರಹಿಸಲಾಗಿದೆ ಎಂಬುದು ಖಚಿತಗೊಂಡಿದೆ. ಈ ಎಟಿಎಂ ನೆಟ್ವರ್ಕ್ ಎಲ್ಲಾ ಬ್ಯಾಂಕ್ ಗಳೊಂದಿಗೆ ಜೋಡಣೆಯಾಗಿರುವುದರಿಂದ ಬ್ಯಾಂಕ್ ಖಾತೆದಾರರ ಮಾಹಿತಿ ಚೀನಾ ಕಳ್ಳರ ಕೈಸೇರಿದೆ. ಇದು ಮೇ, ಜೂನ್ ತಿಂಗಳುಗಳ ನಡುವೆ ನಡೆದಿದ್ದರೂ, ತಮ್ಮ ಖಾತೆಗಳಿಂದ ಹಣ ಕಳೆದಿದೆ ಎಂದು ಗ್ರಾಹಕರು ಸೆಪ್ಟೆಂಬರ್, ಅಕ್ಟೋಬರ್ ಗಳಲ್ಲಿ ದೂರು ನೀಡಿದಾಗ ತಡವಾಗಿ ಬೆಳಕಿಗೆ ಬಂದಿದೆ.

600 ಕ್ಕೂ ಹೆಚ್ಚು ಗ್ರಾಹಕರು ಈ ಹ್ಯಾಕಿಂಗ್ ಮೂಲಕ ಹಣ ಕಳೆದುಕೊಂಡಿದ್ದಾರೆ, ಅವರ ಲೇವಾದೇವಿಗಳ ಮೌಲ್ಯ ₹1.3 ಕೋಟಿ ಕಳ್ಳತನಕ್ಕೆ ಗುರಿಯಾಗಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ವರದಿ ಮಾಡಿತ್ತು. ಹ್ಯಾಕಿಂಗ್ ನಡೆದಿರುವುದರ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಹಿಟಾಚಿ ಪೇಮೆಂಟ್ ಸರ್ವೀಸಸ್ ಖಚಿತಪಡಿಸಿದೆ. ತಮ್ಮ ಭದ್ರತಾ ಕ್ರಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

ನಮ್ಮ ಸೆಕ್ಯೂರಿಟಿ ಸಿಸ್ಟಮ್ಸ್ ಕಳುವಿಗೆ ಗುರಿಯಾಗಿದ್ದನ್ನು ಒಪ್ಪಿಕೊಳ್ಳುತ್ತಿದ್ದೇವೆ, ಶೀಘ್ರದಲ್ಲೇ ಈ ಕಳ್ಳತನವನ್ನು ಪತ್ತೆ ಹಚ್ಚುತ್ತೇವೆ. ನಂತರ ಆ ವಿವರಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಗಳಿಗೆ ನೀಡುತ್ತೇವೆ ಎಂದು ಕಂಪನಿ ಹೇಳಿದೆ.