ದೇಶ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ : ಮಮತಾ ಬ್ಯಾನರ್ಜಿ

ನವದೆಹಲಿ: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದರು. ಇಂದು ಆಕೆ ದೆಹಲಿ ಸಿಎಂ ಕೇಜ್ರಿವಾಲ್ ಜೊತೆ ಸೇರಿ ಆಜಾದ್‌ಪುರ್ ಮಂಡಿ ಪ್ರದೇಶದಲ್ಲಿ ಇರುವ ಆರ್‌ಬಿಐ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ದೊಡ್ಡ ನೋಟು ರದ್ದು ಮಾಡಿದ ಮೋದಿ ತೀರ್ಮಾನವನ್ನು ಅವರು ಖಂಡಿಸಿದರು. ಮೂರು ದಿನಗಳಲ್ಲಿ ನೋಟು ರದ್ದು ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದರು. ತುರ್ತು ಪರಿಸ್ಥಿತಿ ಸಮಯದಲ್ಲಿಯೂ ಇಂತಹ ಪರಿಸ್ಥಿತಿ ನೋಡಿರಲಿಲ್ಲ ಎಂದು ಅವರು ಹೇಳಿದರು.

ಇದೀಗ ನೋಟು ಬದಲಾವಣೆ ಮಿತಿಯನ್ನು ದಿನಕ್ಕೆ 2000 ಕ್ಕೆ ಇಳಿಸಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದ ಆಕೆ, ನೋಟು ಬದಲಾವಣೆ ಮಿತಿ ಕಡಿಮೆ ಮಾಡಿದ್ದಾರೆ ಎಂದರೆ ಸರ್ಕಾರದ ಬಳಿ ಹಣವಿಲ್ಲ. ಅಂದರೆ ದೇಶ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ ಎಂದು ಹೇಳಿದರು.

ಕಪ್ಪು ಹಣವನ್ನು ತಾವೂ ವಿರೋಧಿಸುವುದಾಗಿ ಹೇಳಿದ ಮಮತಾ, ನೋಟು ರದ್ದು ಜಾರಿ ಮಾಡಿದ ರೀತಿಯನ್ನು ವಿರೋಧಿಸುತ್ತೇನೆ ಎಂದರು. ಸ್ವತಂತ್ರ ಭಾರತದಲ್ಲಿ ನೋಟು ರದ್ದು ಕ್ರಮವೇ ದೊಡ್ಡ ಹಗರಣ ಆರೋಪಿಸಿದರು.