Mamata Banerjee

ನೇತಾಜಿ ಹುಟ್ಟು ಹಬ್ಬವನ್ನು ರಾಷ್ಟ್ರೀಯ ರಜೆ ಎಂದೇಕೆ ಘೋಷಿಸಿಲ್ಲ: ಮಮತಾ ಬ್ಯಾನರ್ಜಿ

ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸದ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಾ ಪ್ರಹಾರ ನಡೆಸಿದ್ದಾರೆ. ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 121 ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಜನವರಿ 20 ರಂದು ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಗಳನ್ನು ರಾಷ್ಟ್ರೀಯ ರಜೆಗಳೆಂದು ಘೋಷಿಸುವಂತೆ ತಾವು ಪ್ರಧಾನಿ ಕಛೇರಿಗೆ ಬರೆದಿದ್ದ ಪತ್ರದ ಕುರಿತು ಅವರು ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಅಷ್ಟು ಗೌರವ ತೋರಿಸಲು ಸಾಧ್ಯವಿಲ್ಲವೇ?

ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬವನ್ನು ಇನ್ನೂ ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಿಲ್ಲ, ನಾವು ಅವರಿಗೆ ಅಷ್ಟು ಗೌರವ ತೋರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಪಶ್ಚಿಮ ಬಂಗಾಳದಲ್ಲಿ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಲಾಗಿದೆ ಎಂದು ನೆನಪಿಸಿದರು.

Netaji Subhash Chandra Bose

ನೇತಾಜಿ ಅವರ ನಿಧನದ ವಿಷಯದಲ್ಲಿ ದೇಶದ ಜನರಿಗೆ ಕೇವಲ ಒಂದು ವರ್ಗ ನಂಬುವಂತಹ ಸತ್ಯವೇ ತಿಳಿದಿದೆ. 1945 ರಲ್ಲಿ ನೇತಾಜಿ ಕಣ್ಮರೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ರಹಸ್ಯ ಕಡತಗಳನ್ನು ಬಹಿರಂಗಗೊಳಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ದೇಶದ ಜನರಿಗೆ ನೇತಾಜಿ ಕಣ್ಮರೆ ಸಂದರ್ಭದಲ್ಲಿ ಏನು ನಡೆಯಿತು ಎಂದು ತಿಳಿದುಕೊಳ್ಳುವ ಬಯಕೆಯಿದೆ ಎಂದು ಹೇಳಿದರು.

Netaji Subhash Chandra Bose

ಮಾಹಿತಿ ಹಕ್ಕು ಕಾಯ್ದೆಯಡಿ ಮೇ 2017 ರಲ್ಲಿ ಉತ್ತರಿಸಿದ್ದ ಕೇಂದ್ರ ಸರ್ಕಾರ, ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರು 1945 ರಲ್ಲಿ ತೈವಾನ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿತ್ತು. ಆದರೆ ಇದೇ ಸತ್ಯವನ್ನು ಜನರು ಇಲ್ಲಿಯವರೆಗೂ ನಂಬುತ್ತಾ ಬಂದಿದ್ದರಾದರೂ, ಈ ವಿಚಾರ ಇದುವರೆಗೂ ದೃಡಪಟ್ಟಿಲ್ಲ. ಸರ್ಕಾರವು ನೇತಾಜಿ ಕಣ್ಮರೆಗೆ ಸಂಬಂಧಿಸಿದ ದಾಖಲೆಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ 2015 ರಲ್ಲಿ ಹೇಳಿತ್ತು.

Get Latest updates on WhatsApp. Send ‘Subscribe’ to 8550851559