ಮೋದಿ ಭಾಷಣ ಪ್ರಸಾರ ನಿಷೇಧ, ಮುಂದುವರೆದ ಮಮತಾ ದ್ವೇಷ ನಡೆ – News Mirchi

ಮೋದಿ ಭಾಷಣ ಪ್ರಸಾರ ನಿಷೇಧ, ಮುಂದುವರೆದ ಮಮತಾ ದ್ವೇಷ ನಡೆ

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ 125 ನೇ ವಾರ್ಷಿಕೋತ್ಸವ ಅಂಗವಾಗಿ ಮೋದಿಯವರು ಮಾಡಲುದ್ದೇಶಿಸಿರುವ ಭಾಷಣದ ನೇರ ಪ್ರಸಾರ ತಡೆಗೆ ಮಮತಾ ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿದೆ. ಪ್ರಧಾನಿ ಭಾಷಣ ನೇರ ಪ್ರಸಾರ ಮಾಡುವಂತೆ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪಾಲಿಸುವ ಅವಶ್ಯಕತೆಯಿಲ್ಲ ಎಂದು ತನ್ನ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವರ್ತನೆಗೆ ಭಾರತೀಯ ಜನತಾ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಭಾನುವಾರ ಕೋಲ್ಕತಾ ಸೇರಿದಂತೆ ದೇಶಾದ್ಯಂತ ಎಲ್ಲಾ ವಿಶ್ವಿವಿದ್ಯಾಲಯಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರ ಮಾಡಲು ಯುಜಿಸಿ ಸಿದ್ಧತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಕಾಲೇಜುಗಳಿಗೂ ಆದೇಶಗಳನ್ನೂ ಜಾರಿ ಮಾಡಿತ್ತು.

ಆದರೆ ಪಶ್ಚಿಮ ಬಂಗಾಳ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಪ್ರಧಾನಿಯವರ ಭಾಷಣ ಪ್ರಸಾರ ಮಾಡದಂತೆ ಮಮತಾ ಬ್ಯಾನರ್ಜಿ ಸರ್ಕಾರ ಆದೇಶಿಸಿದೆ. ಹೀಗಾಗಿ ಮಮತಾ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಪ್ರಜಾಪ್ರಭುತ್ವದಡಿ ಆಯ್ಕೆಯಾದ ಒಬ್ಬ ಮುಖ್ಯಮಂತ್ರಿಯು ಪ್ರಧಾನ ಮಂತ್ರಿಯವರ ಭಾಷಣಕ್ಕೆ ಅಡ್ಡಿಪಡಿಸುವುದು ನಾಚಿಕೆಗೇಡು ಎಂದು ಬಿಜೆಪಿ ಅಧಿಕೃತ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.

ಈ ಹಿಂದೆ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂಬಂಧ ಕೇಂದ್ರದ ಅಧಿಸೂಚನೆಯನ್ನು ಮಮತಾ ಸರ್ಕಾರ ತಿರಸ್ಕರಿಸಿತ್ತು. ಹಾಗೆಯೇ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 1 ರಿಂದ 15 ರವರೆಗೆ “ಸ್ವಚ್ಛತಾ ಪಖ್ವಾಡ” ನಿರ್ವಹಿಸುವ ಸೂಚನೆಯನ್ನೂ ತಿರಸ್ಕರಿಸಿತ್ತು.

Loading...