ಬಿಜೆಪಿಯನ್ನು ದೇಶದಿಂದ ಹೊರಗೋಡಿಸುತ್ತೇವೆ, ಇದು ನನ್ನ ಸವಾಲು: ಮಮತಾ ಬ್ಯಾನರ್ಜಿ – News Mirchi

ಬಿಜೆಪಿಯನ್ನು ದೇಶದಿಂದ ಹೊರಗೋಡಿಸುತ್ತೇವೆ, ಇದು ನನ್ನ ಸವಾಲು: ಮಮತಾ ಬ್ಯಾನರ್ಜಿ

ಕೋಲ್ಕತಾ: ಬಿಜೆಪಿಯನ್ನು ದೇಶದಿಂದ ಹೊರಗೋಡಿಸಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಬಿಜೆಪಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಮತಾ, ಬಿಜೆಪಿಗೆ ವಿರುದ್ಧವಾಗಿ ಯಾವ ಪಕ್ಷ ಹೋರಾಟ ನಡೆಸಿದರೂ ತಮ್ಮ ಬೆಂಬಲವಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 1993 ರಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಯೂತ್ ಕಾಂಗ್ರೆಸ್ ನ 13 ಜನ ಸಾವನ್ನಪ್ಪಿದ ನೆನಪಿಗಾಗಿ ಪ್ರತಿವರ್ಷದಂತೆ ಶುಕ್ರವಾರ(ಜುಲೈ21) ತೃಣಮೂಲ ಕಾಂಗ್ರೆಸ್ ಹಮ್ಮಿಕೊಂಡಿದ್ದ “ಹುತಾತ್ಮರ ದಿನದ ರ್ಯಾಲಿ” ಯಲ್ಲಿ ಅವರು ಮಾತನಾಡುತ್ತಿದ್ದರು.

ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಿಜೆಪಿಯನ್ನು ದೇಶದಿಂದ ಹೊರಗೋಡಿಸಬೇಕು ಎಂಬ ಘೋಷಣೆಯೊಂದಿಗೆ ಆಗಸ್ಟ್ 9 ರಿಂದ 30 ರವರೆಗೆ ಬೃಹತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು. ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಆಕೆ, ಭಾರತದಿಂದ ಬಿಜೆಪಿಯನ್ನು ಬಹಿಷ್ಕರಿಸುತ್ತೇವೆ, ಇದು ನಮ್ಮ ಸವಾಲು ಎಂದು ಹೇಳಿದರು.

ಶಾರದಾ, ನಾರದಾ ಹಗರಣಗಳ ಹೆಸರಿನಲ್ಲಿ ತಮ್ಮನ್ನು ಹೆದರಿಸಲು ಕೇಂದ್ರ ನೋಡುತ್ತಿದೆ, ಆದರೂ ತಾವು ಹೆದರುವುದಿಲ್ಲ, ನಮ್ಮಲ್ಲಿ ಯಾರೂ ಯಾವುದೇ ತಪ್ಪು ಮಾಡಿಲ್ಲ ಎಂದರು. ಸಿಬಿಐ ಮತ್ತು ಕೇಂದ್ರ ತನಿಖಾ ತಂಡಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತಿಳಿಸಿದರು. ನಾವು ಯಾವುದೇ ತಪ್ಪು ಮಾಡದಿದ್ದರೂ, ನಮ್ಮ ಪಕ್ಷದ ನಾಯಕರ ಮಾನ ಕಳೆಯುತ್ತಿದ್ದಾರೆ ಎಂದು ಆಕೆ ಕಿಡಿ ಕಾರಿದರು.

ಹೆದರುವ, ಬೆದರುವ ಪ್ರಶ್ನೆಯೇ ಇಲ್ಲ, ಚೀನಾವನ್ನು ಎದುರಿಸಲು ಭಾರತ ಸಿದ್ಧ

ಕೇಂದ್ರ ಸರ್ಕಾರ ನಮ್ಮನ್ನು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಅವರದು ಜನರಿಂದ ಆಯ್ಕೆಯಾದ ಸರ್ಕಾರವಾದರೆ, ನಮ್ಮದೂ ಜನರಿಂದ ಆಯ್ಕೆಯಾದ ಸರ್ಕಾರ. ನಾವು ಯಾರ ಗುಲಾಮರಲ್ಲ ಎಂದು ಹೇಳಿದರು. ಬಿಜೆಪಿ ವಿರುದ್ಧ ವೇದಿಕೆಯೊಂದು ಸೃಷ್ಟಿಯಾಗಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ 18 ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪಕ್ಷಗಳು ಬಿಜೆಪಿ ವಿರುದ್ಧ ನಮ್ಮ ಕೈಜೋಡಿಸಲಿವೆ. 2019 ರ ಲೋಕಸಭೆ ಚುನಾವಣೆಯನ್ನು ಸುಲಭವಾಗಿ ಗೆಲ್ಲಬಹದು ಎಂದು ಬಿಜೆಪಿ ಯೋಚಿಸುತ್ತಿದೆ, ಆದರೆ ಅದು ಅವರಂದುಕೊಂಡಷ್ಟು ಸುಲಭವಲ್ಲ ಎಂದು ಭವಿಷ್ಯ ಮಮತಾ ಭವಿಷ್ಯ ನುಡಿದಿದ್ದಾರೆ.

Loading...